ಮಂಗಳೂರು: ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಎರಡು ಠಾಣೆಗಳ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
*ನಗರದ ಪಂಪ್‌ವೆಲ್‌ನಿಂದ ನಂತೂರು ಕಡೆಗೆ ತೆರಳುವ ಸರ್ವಿಸ್ ರಸ್ತೆಯ ಬದಿ ಸುಮಾರು 30-35 ವರ್ಷ ಪ್ರಾಯದ ಯುವಕನೊಬ್ಬ ರಿಕ್ಷಾದಲ್ಲಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕದ್ರಿ ಪೊಲೀಸರು ಆ.18ರಂದು ದಾಳಿ ನಡೆಸಿ ಮಂಜೇಶ್ವರ ವರ್ಕಾಡಿಯ ಮುಹಮ್ಮದ್ ಇರ್ಷಾದ್ (30) ಎಂಬಾತನನ್ನು ಬಂಧಿಸಿದರು. ಈತನಿಂದ ಅಂದಾಜು 1.36 ಲಕ್ಷ ರೂ. ಮೌಲ್ಯದ 13.69 ಗ್ರಾಂ ತೂಕದ ಮಾದಕ ವಸ್ತು ಮತ್ತು ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,94,500 ರೂ. ಎಂದು ಅಂದಾಜಿಸಲಾಗಿದೆ.
*ಸುರತ್ಕಲ್ ಠಾಣಾ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪಿ ಕದ್ರಿ ಗ್ರಾಮದ ಪದವು ಮೈದಾನದ ಬಳಿಯ ಆಯುರ್ವೇದ ಕ್ಲಿನಿಕ್‌ನಲ್ಲಿ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಕೇರಳ ಕಣ್ಣೂರಿನ ಚಿರುಪುಝಾ ಗ್ರಾಮದ ನಿತಿನ್ ಕೃಷ್ಣನ್ (27) ಎಂಬಾತನನ್ನು ಆ.18ರಂದು ಬಂಧಿಸಿದ್ದಾರೆ. ಈತನಿಂದ ಈತನಿಂದ 60 ಸಾವಿರ ರೂ. ಮೌಲ್ಯದ 1.206 ಕೆ.ಜಿ. ಗಾಂಜಾ, ಬೈಕ್ ಹಾಗೂ ಮೊಬೈಲ್ ಫೋನ್ ವಶ ಪಡಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನವಾಗಿದೆ.

