HomeFresh Newsಯುವವಾಹಿನಿ ಪಡುಬಿದ್ರಿ ಘಟಕದ ಪದಗ್ರಹಣ ಸಮಾರಂಭ; ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ

ಯುವವಾಹಿನಿ ಪಡುಬಿದ್ರಿ ಘಟಕದ ಪದಗ್ರಹಣ ಸಮಾರಂಭ; ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ

ಪಡುಬಿದ್ರಿ: “ಯುವಜನತೆಯೇ ದೇಶದ ನಿಜವಾದ ಸಂಪತ್ತು. ಸಮಾಜದ ಶ್ರೇಯೋಭಿವೃದ್ಧಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಯುವವಾಹಿನಿ ಸಂಸ್ಥೆ ನಿರಂತರವಾಗಿ ಸಲ್ಲಿಸುತ್ತಿರುವ ಸೇವೆ ಅತ್ಯಂತ ಶ್ಲಾಘನೀಯ. ಯುವಶಕ್ತಿ ಸದಾ ರಚನಾತ್ಮಕ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಬ್ರಿಟನ್ ಬಿಲ್ಲವ ಬಳಗದ ಮುಖ್ಯಸ್ಥ ಹಾಗೂ ಅನಿವಾಸಿ ಭಾರತೀಯ ವೈದ್ಯರಾದ ಡಾ. ಪಿ.ಕೆ. ಮನೋಜ್ ಪೂಜಾರಿ ಹೇಳಿದರು.
ಅವರು ಭಾನುವಾರ, ಆಗಸ್ಟ್ 30ರಂದು ಪಡುಬಿದ್ರಿಯ ಸಹಕಾರ ಸಂಗಮ ಸಿ.ಎ. ಸೊಸೈಟಿ ಸಭಾಂಗಣದಲ್ಲಿ ನಡೆದ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರು ನೂತನ ಅಧ್ಯಕ್ಷ ನಿಖಿಲ್ ಪೂಜಾರಿ ಹಾಗೂ ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ನಿರ್ಗಮಿತ ಅಧ್ಯಕ್ಷ ವಿಧಿತ್ ಕುಮಾರ್ ಕರ್ನಿರೆ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, ನೂತನ ತಂಡದ ಮುಂದಿನ ಕಾರ್ಯಯೋಜನೆಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಯುವ ಉದ್ಯಮಿ ಗಣೇಶ್ ಗುಜರನ್, ಮಂಗಳೂರಿನ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಕೆ. ಕಿರಣ್ ಕುಮಾರ್, ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಮಮತಾ ರಾಜ್ ಭಾಗವಹಿಸಿದ್ದರು.
ಅವರು ಯುವವಾಹಿನಿ ಪಡುಬಿದ್ರಿ ಘಟಕವು ಕಳೆದ ಸಾಲಿನಲ್ಲಿ ದಾಖಲಿಸಿದ ಯಶಸ್ವಿ ಸಾಧನೆಗಳನ್ನು ಪ್ರಶಂಸಿಸಿ, ನೂತನ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಿದರು.


ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ, ಪ್ರತಿಭಾ ಪುರಸ್ಕಾರ
ಇದೇ ಸಂದರ್ಭದಲ್ಲಿ ಸಮಾಜದ ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ‘ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ’ ವಿತರಿಸಲಾಯಿತು. ಅಲ್ಲದೆ, ಯುವವಾಹಿನಿ ಸದಸ್ಯರ ಕುಟುಂಬದ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗಣ್ಯರಿಗೆ ಸನ್ಮಾನ
ಸಮಾಜ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಗುರುತಿಸಿ ಡಾ. ಪಿ.ಕೆ. ಮನೋಜ್ ಪೂಜಾರಿ ಹಾಗೂ ಡಾ. ಬೃಂದಾ ಮನೋಜ್ ದಂಪತಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಘಟಕದ ಚಟುವಟಿಕೆಗಳಿಗೆ ನಿರಂತರ ಮಾರ್ಗದರ್ಶನ ಹಾಗೂ ಸಹಕಾರ ನೀಡುತ್ತಿರುವ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರನ್ನು ಘಟಕದ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು. ಕಳೆದ ಸಾಲಿನಲ್ಲಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ ನಿರ್ಗಮಿತ ಅಧ್ಯಕ್ಷ ವಿಧಿತ್ ಪೂಜಾರಿ, ಘಟಕದ ಮಾಜಿ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಇದೇ ಸಂದರ್ಭದಲ್ಲಿ ಕೃತಜ್ಞತಾಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸುಗಂಧಿ ಶ್ಯಾಮ್ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷ ವಿಧಿತ್ ಕುಮಾರ್ ಗಣ್ಯರನ್ನು ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷ ಸುಜಿತ್ ಕುಮಾರ್ ಕಾರ್ಯಕ್ರಮದ ಪ್ರಸ್ತಾವನೆಗೈದರು. ನಿರ್ಗಮಿತ ಕಾರ್ಯದರ್ಶಿ ಭಾಸ್ಕರ್ ಎನ್. ಅಂಚನ್ ವಾರ್ಷಿಕ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ರಾಜೇಶ್ವರಿ ಅವಿನಾಶ್ ಧನ್ಯವಾದ ಸಮರ್ಪಿಸಿದರು.
ಚೈತ್ರ ಗಣೇಶ್, ಚೈತ್ರ ಮನೋಹರ್ ಹಾಗೂ ಹರೀಶ್ ಕೋಟ್ಯಾನ್ ಉಳ್ಳೂರು ಕಾರ್ಯಕ್ರಮ ನಿರ್ವಹಿಸಿದರು. ಘಟಕದ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments