ಸುಳ್ಯ: ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ, ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಸುಳ್ಯ ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಇಮ್ರಾನ್ ಶೇಖ್, ತಂದೆ ಲಾಲ್ ಚಂದ್ ಶೇಖ್, ಬಾಮನ್ ಪುಕೂರ್ ಗ್ರಾಮ, ಶ್ರೀಮಾಯಾಪುರ ಅಂಚೆ, ನಾದಿಯಾ ಜಿಲ್ಲೆ, ಪಶ್ಚಿಮ ಬಂಗಾಳ ನಿವಾಸಿ ಎಂದು ಗುರುತಿಸಲಾಗಿದೆ.
ಸುಳ್ಯ ಪೊಲೀಸ್ ಠಾಣಾ ಅ.ಕ್ರ. 138/2022, U/S 302, 316 IPC ಹಾಗೂ ಪುತ್ತೂರು ನ್ಯಾಯಾಲಯದ SC No. 5024/2023 ಪ್ರಕರಣಕ್ಕೆ ಸಂಬಂಧಿಸಿ ಇಮ್ರಾನ್ ಶೇಖ್ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು. ಆರೋಪಿಯು ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ಸುಮಾರು ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಆರೋಪಿಯ ಪತ್ತೆಗಾಗಿ ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯಕ ಹಾಗೂ ಸುಳ್ಯ ಪೊಲೀಸ್ ಠಾಣೆಯ ಪಿಎಸ್ಐ ಉದಯ ರವಿ ಎಂ. ಅವರ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಸೆಪ್ಟೆಂಬರ್ 1, 2026ರಂದು ಠಾಣಾ ಸಿಬ್ಬಂದಿಗಳಾದ ಹೆಚ್ಸಿ 368 ರಾಜು ನಾಯ್ಕ್ ಡಿ., ಪಿ.ಸಿ. 2283 ಶ್ರೀಶೈಲ ಎಂ.ಕೆ. ಹಾಗೂ ಪಿ.ಸಿ. 1020 ಸೋಮಯ್ಯ ಹಿರೇಮಠ ಅವರು ಪಶ್ಚಿಮ ಬಂಗಾಳದ 24 ನಾರ್ತ್ ಪರಗಣಾಸ್ ಜಿಲ್ಲೆಯ ಹಾದಿಪುರ್ ಗ್ರಾಮದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


