ಕೊಕ್ಕಡ: ಆನೆಗಳ ಹಾವಳಿಯಿಂದ ಸಾರ್ವಜನಿಕರು, ಕೃಷಿಕರು ಹಾಗೂ ಅವರ ಕೃಷಿ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ, ಆನೆ ಹಾವಳಿ ನಿಯಂತ್ರಣಕ್ಕೆ ಬಂದು ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಪ್ರಾರ್ಥಿಸಿ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ವತಿಯಿಂದ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ ಸಲ್ಲಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ಕೊಕ್ಕಡ, ಸೌತಡ್ಕ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆಗಳ ಸಂಚಾರ ಹಾಗೂ ಹಾವಳಿಯಿಂದ ಕೃಷಿಕರು ಆತಂಕಕ್ಕೊಳಗಾಗಿದ್ದಾರೆ. ಆನೆಗಳು ಕೃಷಿ ಪ್ರದೇಶಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿ ಉಂಟುಮಾಡುವುದರ ಜತೆಗೆ, ಜನರ ಜೀವ ಹಾಗೂ ಆಸ್ತಿಪಾಸ್ತಿಗೂ ಅಪಾಯ ಎದುರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದರು.
ಸಾರ್ವಜನಿಕರು ಹಾಗೂ ಕೃಷಿಕರಿಗೆ ಯಾವುದೇ ರೀತಿಯ ಜೀವಹಾನಿ ಸಂಭವಿಸದಂತೆ, ಬೆಳೆ ಮತ್ತು ಸೊತ್ತುಗಳಿಗೆ ಹಾನಿಯಾಗದಂತೆ ಹಾಗೂ ಕಾಡಾನೆಗಳು ಕಾಡಿನತ್ತವೇ ತೆರಳಿ ಜನವಸತಿ ಪ್ರದೇಶಗಳಿಗೆ ಬಾರದಂತೆ ಶ್ರೀ ಮಹಾಗಣಪತಿ ದೇವರಲ್ಲಿ ಪ್ರಾರ್ಥಿಸಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಒಗ್ಗೂಡಿ ರಂಗಪೂಜೆ ನೆರವೇರಿಸುವ ಮೂಲಕ ಆನೆ ಹಾವಳಿ ಶಮನವಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಆರ್‌ಎಫ್‌ಒ ರಾಘವೇಂದ್ರ, ಡಿಆರ್‌ಎಫ್‌ಒಗಳಾದ ಶಿವಾನಂದ ಆಚಾರ್ಯ, ಯತೀಂದ್ರ, ಸುನೀಲ್, ವಿನಯ್, ಪ್ರವೀಣ್, ಭವಾನಿ ಶಂಕರ ಹಾಗೂ ಹರಿಪ್ರಸಾದ್, ಗಸ್ತು ಅರಣ್ಯಪಾಲಕರಾದ ಸುನೀಲ್ ನಾಯ್ಕ, ನಾಗಲಿಂಗ, ದಿವಾಕರ ರೈ, ದೀಕ್ಷಾ, ಸವಿತಾ, ಶಿವಾನಂದ ಕುದುರಿ ಹಾಗೂ ಸಚಿನ್, ವಾಚರ್ ಸೇಸಪ್ಪ, ಚಾಲಕ ಕಿಶೋರ್ ಮತ್ತು ಮುಂಡೂರುಪಳಿಕೆ ಶ್ರೀಕೃಷ್ಣ ಕುಮಾರ್ ಭಟ್ ಉಪಸ್ಥಿತರಿದ್ದರು.


