ಉಡುಪಿ, ಬಂಟಕಲ್ 12 ಸೆಪ್ಟೆಂಬರ್ 2026: ಶ್ರೀ ಮಧ್ಯ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಹಪಠ್ಯ ಚಟುವಟಿಕ ಘಟಕವು ದಿನಾಂಕ 12 ಸೆಪ್ಟೆಂಬರ್ 2026 ರಂದು ಸ್ಪರ್ಧಾತ್ಮಕ ಪರೀಕ್ಷೆ “ಗೇಟ್” ಕುರಿತು ಉಪನ್ಯಾಸವನ್ನು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿತ್ತು.

IDYAITE Technology Solutions Pvt. Ltd ಮಂಗಳೂರು ಇಲ್ಲಿನ ಫುಲ್ ಸ್ಟ್ರಾಕ್ ಡೆವೆಲಪರ್ ಆಗಿರುವ ಅಂಕಿತಾ ಆರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಇವರು ಮಾತನಾಡಿ ಪರೀಕ್ಷೆ ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಹತೆ, ಪರೀಕ್ಷಾ ಮಾದರಿ, ಪಠ್ಯಕ್ರಮ, ವೃತ್ತಿ ಅವಕಾಶಗಳು ಹಾಗೂ ತಯಾರಿ ತಂತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ವ್ಯವಸ್ಥಿತ ತಯಾರಿ, ನಿಯಮಿತ ಪುನರಾವಲೋಕನ, ಮಾಕ್ ಟೆಸ್ಟ್ಗಳು ಹಾಗೂ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸುವುದರ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು. ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಸರ್ಕಾರಿ ಸೇವೆಗಳಲ್ಲಿ ದೊರೆಯುವ ಅವಕಾಶಗಳ ಕುರಿತು ವಿವರಿಸಿದ ಅವರು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು.
ಉಪನ್ಯಾಸವು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಹಾಗೂ ವೃತ್ತಿಜೀವನದ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿಕೊಳ್ಳಲು ಪ್ರೇರಣೆ ನೀಡಿತು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆತ್ಮ ವಿಶ್ವಾಸದಿಂದ ಎದುರಿಸಲು ಸಹಾಯಕವಾಯಿತು.


