HomeFresh Newsರಷ್ಯಾದ ಜಾಗತಿಕ ಪರಿಸರ ವೇದಿಕೆಯಲ್ಲಿ ವಿವೇಕ್ ಆಳ್ವ ಉಪನ್ಯಾಸ

ರಷ್ಯಾದ ಜಾಗತಿಕ ಪರಿಸರ ವೇದಿಕೆಯಲ್ಲಿ ವಿವೇಕ್ ಆಳ್ವ ಉಪನ್ಯಾಸ

ಮೂಡುಬಿದಿರೆ: ರಷ್ಯನ್ ವಿಜ್ಞಾನ ಅಕಾಡೆಮಿಯ ಕರೇಲಿಯನ್ ಸಂಶೋಧನಾ ಕೇಂದ್ರವು ರಷ್ಯನ್ ರಾಷ್ಟ್ರೀಯ ಬ್ರಿಕ್ಸ್ ಸಂಶೋಧನಾ ಸಮಿತಿಯ ಸಹಯೋಗದಲ್ಲಿ ರಷ್ಯಾದ ಕರೇಲಿಯಾ ಗಣರಾಜ್ಯದ ಪೆಟ್ರೋಜಾವೊಡ್ಸ್ಕ್ನಲ್ಲಿ ಸೆಪ್ಟೆಂಬರ್ 15ರಿಂದ 17ರವರೆಗೆ ‘ಬ್ರಿಕ್ಸ್ ರಾಷ್ಟ್ರಗಳ ಪ್ರಾದೇಶಿಕ ಸಹಕಾರದ ಮೂಲಕ ಪರಿಸರ ಮತ್ತು ಪ್ರಕೃತಿ ನಿರ್ವಹಣೆ’ ಎಂಬ ವಸ್ತು ವಿಷಯದೊಂದಿಗೆ ನಡೆಯುವ ಮೂರನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಸೇರಿದಂತೆ ಭಾರತದ ಇತರ ಐವರು ವಿಷಯ ತಜ್ಞರು ಭಾಗವಹಿಸಲಿದ್ದಾರೆ.

ಈ ಅಧಿವೇಶನದಲ್ಲಿ ವಿವೇಕ್ ಆಳ್ವ, ‘‘ಪಶ್ಚಿಮಘಟ್ಟಗಳ ಸಂರಕ್ಷಣೆ: ಜಾಗೃತಿಯಿಂದ ಸಮುದಾಯದ ಕಾರ್ಯದತ್ತ’’ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ಪರಿಸರ ಸಂರಕ್ಷಣೆಯಲ್ಲಿ ಸಮುದಾಯಗಳು ಹಾಗೂ ಯುವಜನರ ಪಾತ್ರವನ್ನು ಅವರು ವಿವರಿಸಲಿದ್ದು, ವಿಶೇಷವಾಗಿ ಪಶ್ಚಿಮಘಟ್ಟಗಳ ಪರಿಸರ ಸಂರಕ್ಷಣೆಯ ಕುರಿತು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.
ಅವರ ಅಧಿವೇಶನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕೈಗೊಂಡಿರುವ ವಿವಿಧ ಪರಿಸರ ಸಂರಕ್ಷಣಾ ಉಪಕ್ರಮಗಳನ್ನೂ ಪ್ರಸ್ತುತಪಡಿಸಲಾಗುವುದು. ಇದರಲ್ಲಿ ಶೋಭಾವನ ಮತ್ತು ಹರೀಶ್ ಭಟ್ ಪಕ್ಷಿವನದಂತಹ ನೈಸರ್ಗಿಕ ಆವಾಸಸ್ಥಳಗಳ ನಿರ್ಮಾಣವೂ ಸೇರಿದೆ. ಹರೀಶ್ ಭಟ್ ಪಕ್ಷಿವನಕ್ಕೆ 2021ರಲ್ಲಿ ‘ಯುನೈಟೆಡ್ ನೇಷನ್ಸ್ ಆ್ಯಕ್ಟ್ ಟೂ ರಿಸ್ಟೋರ್ ಫಾರ್ ಕ್ಲೆöÊಮೇಟ್ ಆ್ಯಕ್ಷನ್’ ಉಪಕ್ರಮದಡಿ ಮನ್ನಣೆ ದೊರೆತಿರುವುದನ್ನು ಇಲ್ಲಿ ಉಲ್ಲೇಖಿಸಲಾಗುವುದು. ಅಲ್ಲದೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಸಿದ ಹಲವು ಪರಿಸರ ಸ್ವಚ್ಛತಾ ಅಭಿಯಾನಗಳ ಬಗ್ಗೆ ಮಾಹಿತಿ ನೀಡಲಾಗುವುದು.
ಇದರೊಂದಿಗೆ, ಪ್ರತಿಷ್ಠಾನದ ಪ್ರಮುಖ ಉಪಕ್ರಮವಾದ ‘ಹಸಿರು ಸಂವಾದ’ದ ಬಗ್ಗೆಯೂ ಅವರು ಪ್ರಸ್ತಾಪಿಸಲಿದ್ದು, ಇದರಡಿ 46 ಗ್ರಾಮಗಳನ್ನು ಒಳಗೊಳ್ಳಲಾಗಿದೆ.

ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಮುದಾಯ ಆಧಾರಿತ ಕಾರ್ಯಚಟುವಟಿಕೆಗಳಿಗೆ ಈ ಉಪಕ್ರಮದಲ್ಲಿ ವಿಶೇಷ ಒತ್ತು ನೀಡಲಾಗಿದೆ. ಈ ಉಪಕ್ರಮವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ, ‘ಆಳ್ವಾಸ್ ನುಡಿಸಿರಿ–ವಿರಾಸತ್’ ಅಂಗವಾಗಿ ಪರ್ಯಾವರಣ ಸಂರಕ್ಷಣಾ ತಂಡದ ಸಹಯೋಗದಲ್ಲಿ ‘ಹಸಿರು ಸಂವಾದ’ ಸಮ್ಮೇಳನವನ್ನು 2027ರ ಜನವರಿ 6 ಮತ್ತು 7ರಂದು ಹಮ್ಮಿಕೊಂಡಿರುವುದನ್ನು ತಿಳಿಸಲಾಗುವುದು.

ಆಳ್ವಾಸ್ ಶೈಕ್ಷಣಿಕ ಪ್ರತಿಷ್ಠಾನದ ಆಳ್ವಾಸ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ವಿನಯ್ ಶಿವಮೂರ್ತಿಯವರೂ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ‘ಮಧ್ಯ ಪಶ್ಚಿಮಘಟ್ಟಗಳ ಜಲಪರಿಸರಗಳಲ್ಲಿ ಪರಿಸರ ಹರಿವಿನ ಮೌಲ್ಯಮಾಪನದ ಮೂಲಕ ನದೀ ಪರಿಸರ ವ್ಯವಸ್ಥೆಗಳ ಸಂರಕ್ಷಣೆ’ ಎಂಬ ವಿಷಯದ ಕುರಿತು ಅವರು ತಮ್ಮ ಪ್ರಬಂಧವನ್ನು ಮಂಡಿಸಲಿದ್ದಾರೆ.
ಭಾರತದ ನಿಯೋಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನ ಡಾ. ಟಿ.ವಿ. ರಾಮಚಂದ್ರ, ಎನ್‌ಐಟಿಕೆ ಸುರತ್ಕಲ್‌ನ ಡಾ. ಶ್ವೇತಾ ಎಚ್.ಆರ್., ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ನಾಗರಾಜ್ ಎಸ್. ಪಾಟೀಲ್, ಚಾಣಕ್ಯ ವಿಶ್ವವಿದ್ಯಾಲಯದ ಡಾ. ಭರತ್ ಹಾಗೂ ಬೆಳಗಾವಿಯ ಅಂಗಡಿ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಯ ಪ್ರಾಚರ‍್ಯ ಡಾ. ಆನಂದ್ ದೇಶಪಾಂಡೆ ಭಾಗವಹಿಸಲಿದ್ದಾರೆ.
ಬ್ರಿಕ್ಸ್ ರಾಷ್ಟ್ರಗಳ ನಡುವೆ ಪ್ರಾದೇಶಿಕ ಅನುಭವಗಳ ವಿನಿಮಯಕ್ಕೆ ಹಾಗೂ ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯಲ್ಲಿ ಸಹಯೋಗದ ಕ್ರಮಗಳನ್ನು ಬಲಪಡಿಸಲು ಸಮ್ಮೇಳನವು ವೇದಿಕೆ ಕಲ್ಪಿಸಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments