ಬಂಟಕಲ್ಲು: ಶತಮಾನೋತ್ತರ ಇತಿಹಾಸ ಹೊಂದಿರುವ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮವು ಮಕ್ಕಳ ಪ್ರತಿಭೆ, ಸಾಂಸ್ಕೃತಿಕ ವೈವಿಧ್ಯ ಹಾಗೂ ಶಿಕ್ಷಕಿಯರ ನೃತ್ಯ ವೈಭವದಿಂದ ಗಮನ ಸೆಳೆಯಿತು.
ವಿದ್ಯಾರ್ಥಿಗಳೇ ಪ್ರಮುಖ ಪಾತ್ರ ವಹಿಸಿ, ಕಾರ್ಯಕ್ರಮವನ್ನು ಸಂಪೂರ್ಣವಾಗಿ ಸಂಯೋಜಿಸಿದ್ದು ವಿಶೇಷವಾಗಿತ್ತು. ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಬಾಲವಾಡಿ ಮಕ್ಕಳಿಂದ ಗಣೇಶ ಸ್ತುತಿ, ಸಾಮೂಹಿಕ ನೃತ್ಯ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಫಿಲ್ಮ್ ಡ್ಯಾನ್ಸ್, ಕನ್ನಡ, ಆಂಗ್ಲ, ಹಿಂದಿ ಹಾಗೂ ತುಳು ಭಾಷೆಗಳ ಬಹುಭಾಷಾ ನೃತ್ಯ ವೈಭವ, ಯಕ್ಷಗಾನ ನೃತ್ಯ, ಹುಲಿಕುಣಿತ, ಹಾಡುಗಳು ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಮನರಂಜಿಸಿದವು. ಶಿಕ್ಷಕಿಯರ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಂಶಿಕ್ ಸಂಯೋಜಿಸಿದ್ದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು. ಪ್ರಥಮ ತರಗತಿಗೆ ದಾಖಲಾದ ಎಲ್ಲಾ ಒಂಬತ್ತು ವಿದ್ಯಾರ್ಥಿಗಳಿಗೆ ತಲಾ ಮೂರು ಸಾವಿರ ರೂಪಾಯಿ ಮೌಲ್ಯದ ಠೇವಣಿ ಪತ್ರವನ್ನು ನಿವೃತ್ತ ಶಿಕ್ಷಕ ಬಿ. ಪುಂಡಲೀಕ ಮರಾಠೆ ವಿತರಿಸಿ ಶುಭ ಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಆರ್. ಪಾಟ್ಕರ್ ಅವರು ವಿದ್ಯಾರ್ಥಿಗಳ ಪೋಷಕರಿಗೆ ಶಾಲೆಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಶಿಕ್ಷಕಿಯರಾದ ಶಾಲಿನಿ ಆಚಾರ್ಯ, ಸುಮತಿ, ವಿನುತಾ ಆಚಾರ್ಯ, ರೇಶ್ಮಾ, ಶ್ವೇತಾ, ಅಂಗನವಾಡಿ ಶಿಕ್ಷಕಿ ವಿನಯಾ, ಸಹಾಯಕಿ ಸಂಧ್ಯಾ, ಅಕ್ಷರ ದಾಸೋಹದ ಪುಷ್ಪಾ ಶೆಟ್ಟಿ, ದಿನಮಣಿ, ವಿದ್ಯಾರ್ಥಿಗಳ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕು. ಪೂರ್ವಿ ಸ್ವಾಗತಿಸಿದರು. ಬಹುಮಾನ ವಿಜೇತರನ್ನು ಮನೋಜ್ ಪರಿಚಯಿಸಿದರು. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು. ಕು. ಮೇಘನಾ ವಂದಿಸಿದರು.


