ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ 2026-27ನೇ ಸಾಲಿನ ಪ್ರೌಢಶಾಲೆ ಹಾಗೂ ಪದವಿಪೂರ್ವ ವಿಭಾಗದ ವಾರ್ಷಿಕ ಕ್ರೀಡಾಕೂಟವನ್ನು ಸಂಭ್ರಮದಿಂದ ಆಯೋಜಿಸಲಾಯಿತು. ಗೊನ್ಝಾಗ ಶಾಲಾ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ 2024ರ ಅಕ್ವಾ ವುಮನ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತೆ ಸುಚೇತಾ ದೇಬ್ ಬರ್ಮನ್ ಅವರು ಬೆಲೂನ್ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು. ಬಳಿಕ ಕ್ರೀಡಾಧ್ವಜಾರೋಹಣ ನೆರವೇರಿಸಿ, ಕ್ರೀಡಾಜ್ಯೋತಿಯನ್ನು ಬೆಳಗಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಜೆಸ್ವಿಟ್ ಎಜುಕೇಶನಲ್ ಸೊಸೈಟಿ (MJES)ಯ ಕಾರ್ಯದರ್ಶಿ ಹಾಗೂ ಖಜಾಂಚಿ ವಂ. ಫಾ. ಬಲರಾಜ್ ಆರ್.ಜೆ. ಮಾತನಾಡಿ ವಿದ್ಯಾರ್ಥಿಗಳು ಜೀವನದ ಸವಾಲುಗಳನ್ನು ಎದುರಿಸಿ ನಿರಂತರ ಪರಿಶ್ರಮ, ಸಮರ್ಪಣೆ ಹಾಗೂ ದೃಢಸಂಕಲ್ಪದ ಮೂಲಕ ಯಶಸ್ಸು ಸಾಧಿಸಬೇಕು ಎಂದರು. ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡೆಯೂ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಸಮತೋಲಿತ ವ್ಯಕ್ತಿತ್ವ ಬೆಳೆಸುವುದರೊಂದಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಮೂಲ್ಯ ಮೌಲ್ಯಗಳನ್ನು ಕಲಿಸುತ್ತದೆ
ಶಾಲೆಯ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ., ಉಪಪ್ರಾಂಶುಪಾಲರಾದ ಲಾರೆಲ್ ಡಿಸೋಜಾ, ಶೈಕ್ಷಣಿಕ ಸಂಯೋಜಕರಾದ ದೀಪಾ ಕರ್ಕಡ
ಮತ್ತು ದೀಪ್ತಿ ಕರ್ಕಡ, ಕ್ರೀಡಾಕೂಟದ ಸಂಚಾಲಕರಾದ ಆಗ್ನೆಸ್ ಸಲ್ಡಾನ್ಹಾ ಹಾಗೂ ವಿನೋದ್ ಎಂ.ಪಿ. ಉಪಸ್ಥಿತರಿದ್ದರು.
ಕ್ರೀಡಾಕೂಟವು ಶಿಸ್ತಿನ ಪಥಸಂಚಲನದೊಂದಿಗೆ ಆರಂಭಗೊಂಡಿತು. ಕ್ರೀಡಾ ಬಾಲಕ ನಾಯಕ ಮಾಸ್ಟರ್ ಎಥನ್ ಕೀತ್ ನಜರೆತ್ ಹಾಗೂ ಕ್ರೀಡಾ ಬಾಲಕಿ ನಾಯಕಿ ಆಂಡ್ರಿಯಾ ಡಿಯಾನಾ ಪಿಂಟೋ ಅವರ ನೇತೃತ್ವದಲ್ಲಿ ನಡೆದ ಪಥಸಂಚಲನ ಗಮನ ಸೆಳೆಯಿತು. ಬಳಿಕ ಧ್ವಜಾರೋಹಣ ಹಾಗೂ ಹೌಸ್ಗಳ ಪರಿಶೀಲನೆ ನಡೆಯಿತು. ಶಾಲಾ ಗಾಯನ ತಂಡದ ಪ್ರಾರ್ಥನಾ ನೃತ್ಯವು ಕಾರ್ಯಕ್ರಮಕ್ಕೆ ಭಕ್ತಿಭಾವದ ಮೆರುಗು ನೀಡಿತು.

ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದ ಜ್ಯೋತಿ ಹಸ್ತಾಂತರ ಕಾರ್ಯಕ್ರಮವು ಪರಿಶ್ರಮ, ಬದ್ಧತೆ ಹಾಗೂ ಸಾಧನೆಯ ಸಂಕೇತವಾಗಿ ಮೂಡಿಬಂತು. ಕ್ರೀಡಾ ಬಾಲಕಿ ನಾಯಕಿ ಸಮಂತಾ ಕೇಟ್ ಡಿಸೋಜಾ ಅವರು ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ ಸ್ವಾಗತಿಸಿ ಶುಭ ಹಾರೈಸಿದರು .ವಿದ್ಯಾ ಎಸ್ತರ್ ಮತ್ತು ಸ್ಯಾಮ್ಯುಯೆಲ್ ಪೀಟರ್ಸ್ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ಬಲ್ಲಾಳ್ ವಂದಿಸಿದರು .
ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆ, ಪರಿಶ್ರಮ, ಉತ್ಸಾಹ ಹಾಗೂ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು.

ಸಮಾರೋಪ ಸಮಾರಂಭದಲ್ಲಿ ಶಾಲೆಯ ಪ್ರಾಂಶುಪಾಲರಾದ ವಂ.ಫಾ. ರೋಹನ್ ಡಿ’ಅಲ್ಮೇಡಾ ಎಸ್ .ಜೆ ಮಾತನಾಡಿ ಜೀವನ ಮತ್ತು ಕ್ರೀಡೆಯ ನಡುವಿನ ಸಾಮ್ಯತೆಯನ್ನು ವಿವರಿಸಿದರು.ಜೀವನವೆಂಬ ಆಟವನ್ನು ಉತ್ತಮವಾಗಿ ಆಡಲು ಕಲಿಯಬೇಕು. ಇತರರೊಂದಿಗೆ ಸಹಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ದೇವರ ಸೃಷ್ಟಿಯಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಅರ್ಥಪೂರ್ಣವಾಗಿ ನಿರ್ವಹಿಸುವುದೇ ಜೀವನದ ಗುರಿಯಾಗಬೇಕು ಎಂದರು. ಯಾವುದೇ ಸಂದರ್ಭದಲ್ಲೂ ವಂಚನೆ ಅಥವಾ ಕುತಂತ್ರದ
ಮಾರ್ಗ ಅನುಸರಿಸದೆ ಪ್ರಾಮಾಣಿಕತೆ ಮತ್ತು ನ್ಯಾಯಸಮ್ಮತ ನಡವಳಿಕೆಯನ್ನು ಪಾಲಿಸಬೇಕು. ಜೀವನದ ಅಂತಿಮ ಗುರಿ ಸಂತೋಷವಾಗಿರುವುದು ಮತ್ತು ಇತರರನ್ನೂ ಸಂತೋಷವಾಗಿರಿಸುವುದಾಗಿದೆ ಎಂದು ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುಚೇತಾ ದೇಬ್ ಬರ್ಮನ್ ವಹಿಸಿದ್ದರು. ಬಳಿಕ ವಿಜೇತ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

