7ನೇ ವೇತನಆಯೋಗ ವರದಿ ಜಾರಿಗೆ ಮಾಡುವಂತೆ ಪಟ್ಟು ಹಿಡಿದು ಕರ್ತವ್ಯಕ್ಕೆ ಹಾಜರಾಗದೇ ಇಂದಿನಿಂದ ಮುಷ್ಕರ ನಡೆಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಶೇ.17ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಶೇ.17ರಷ್ಟು ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. NPS ಬಗ್ಗೆ ಬೇರೆ ರಾಜ್ಯಗಳಲ್ಲಿ ಏನ್ ಆಗಿದೆ ಎಂದು ವರದಿ ತರೆಸಿಕೊಳ್ಳುತ್ತೇವೆ. ACS ನೇತೃತ್ವದಲ್ಲಿ ಸಮಿತಿ ಮಾಡಿ ಎರಡು ತಿಂಗಳಲ್ಲಿ ವರದಿ ತರೆಸಿಕೊಳ್ಳುತ್ತೇವೆ. ಈಗ ಶೇ. 17ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ರಾಜ್ಯ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಪ್ರತಿಕ್ರಿಯಿಸಿದ್ದು, ಈ ಹಿಂದೆಯೂ ಕೂಡ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದರು. ಅಧಿಕೃತ ಆದೇಶದ ನಿರೀಕ್ಷೆಯಲ್ಲಿದ್ದೇವೆ. ಇನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ಸಭೆಗೆ ಕರೆದಿದ್ದು, ಸಭೆ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

