ಫೇಸ್ಬುಕ್‍ನಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರ ನಿಂದನೆ -ಪರಸ್ಪರ ವಾಗ್ವಾದ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಪೇಸ್ಬುಕ್‍ನಲ್ಲಿ ನಿಂದಿಸಿದ ವಿಚಾರಕ್ಕೆ ಸಂಬಂಧಿಸಿ ರೈ ಅಭಿಮಾನಿಗಳು ಹಾಗೂ ಯುವಕನ ನಡುವೆ ಪರಸ್ಪರ ವಾಗ್ವಾದ ನಡೆದಿದೆ. ಸುಳ್ಯ ತಾಲೂಕಿನ ಜಯನಗರ ನಿವಾಸಿ ಪ್ರಮೀತ್ ಎಂಬಾತ ಶಾಸಕರನ್ನು ಫೇಸ್ಬುಕ್‍ನಲ್ಲಿ ನಿಂದಿಸಿರುವ ಹಿನ್ನೆಲೆಯಲ್ಲಿ ರಾತ್ರಿ ಅವರ ಮನೆಗೆ ರೈ ಅಭಿಮಾನಿಗಳ ತಂಡ ಭೇಟಿ ನೀಡಿ ಮಾತುಕತೆ ನಡೆಸುವ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿದೆ.

ಪುತ್ತೂರು ಪೋಲಿಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಅಶೋಕ್ ಕುಮಾರ್ ರೈಯವರು ಎರಡು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಒಂದು ವಾರ ಕಳೆದರೂ ದಾಖಲೆ ಬಿಡುಗಡೆ ಮಾಡದ ಕಾರಣ ನಿಂದನಾತ್ಮಕ ಪೋಸ್ಟರ್ ಫೇಸ್ಬುಕ್, ಜಾಲತಾಣಗಳಲ್ಲಿ ಟ್ರೋಲ್ ಆಗಿತ್ತು. ಈ ಟ್ರೋಲ್ ಅನ್ನು ಹಂಚಿಕೊಂಡಿದ್ದ ಪ್ರಮೀತ್ ಅದಕ್ಕೆ ಕಮೆಂಟ್ ಮಾಡಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್ ರೈಯವರ ಅಭಿಮಾನಿಗಳ ತಂಡ ಪ್ರಮೀತ್ ಅವರ ಮನೆಗೆ ಭೇಟಿ ನೀಡಿ ಮೆಸೆಜನ್ನು ಡಿಲೀಟ್ ಮಾಡುವಂತೆ ಮತ್ತು ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಾಗ ಮಾತಿಗೆ ಮಾತು ಬೆಳೆದು ಎರಡು ತಂಡಗಳ ನಡುವೆ ವಾಗ್ವಾದ ನಡೆದಿದೆ. ಬಳಿಕ ಡಿವೈಎಸ್ಪಿ ಹಾಗೂ ಸುಳ್ಯ ಪೋಲೀಸರು ಸ್ಥಳಕ್ಕಾಗಮಿಸಿ, ಎರಡು ತಂಡದವರನ್ನು ಸಮಾಧಾನಪಡಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಅಶೋಕ್ ಕುಮಾರ್ ರೈಯವರನ್ನು ನಿಂದನೆ ಮಾಡಿದ್ದಕ್ಕೆ ಕೊನೆಕ್ಷಣದಲ್ಲಿ ಪ್ರಮೀತ್ ಕ್ಷಮೆಯಾಚಿಸಿದ್ದಾರೆ.

Related Posts

Leave a Reply

Your email address will not be published.