ಮೇ 27. ಉಳ್ಳಾಲ ಕಪ್-2023 – ವಾಲಿಬಾಲ್ ಪಂದ್ಯಾಟ

ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ವತಿಯಿಂದ ಉಳ್ಳಾಲ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ಹಗಲಿರುಳು ವಾಲಿಬಾಲ್ ಪಂದ್ಯಾಟ ಜಿಲ್ಲಾ ಚಾಂಪಿಯನ್ ಶಿಪ್ ಉಳ್ಳಾಲ ಕಪ್-2023 ಮೇ 27ರಂದು ಮುಡಿಪುವಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ಈ ಬಗ್ಗೆ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷರಾದ ಬಿ.ಎಸ್. ಸತೀಶ್ ಕುಮಾರ್ ಅವರು, ಜಿಲ್ಲಾ ಚಾಂಪಿಯನ್‍ಶಿಪ್ ಪಂದ್ಯಾಟದಲ್ಲಿ ಪ್ರತಿ ತಾಲೂಕಿನಿಂದ ಪುರುಷರ ಮತ್ತು ಮಹಿಳೆಯರ ಸುಮಾರು 20 ಆಯ್ದ ತಂಡಗಳು ಭಾಗವಹಿಸಲಿವೆ.

ಈ ಪಂದ್ಯಾಟವನ್ನು ಕರ್ನಾಟಕ ಸರ್ಕಾರದ ವಿಧಾನಸಭೆಯ ನೂತನ ಸಭಾಪತಿಗಳಾದ ಯು.ಟಿ. ಖಾದರ್ ಅವರು ಉದ್ಘಾಟನೆಯನ್ನು ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಉಳ್ಳಾಲ ತಾಲೂಕು ವಾಲಿಬಾಲ್ ಅಸೋಸಿಯೇಶನ್ ವತಿಯಿಂದ ನೀಡಲ್ಪಡುವ ವರ್ಷದ ಅತ್ಯುತ್ತಮ ವಾಲಿಬಾಲ್ ಆಟಗಾರ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ವಾಲಿಬಾಲ್ ಆಟಗಾರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು. ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್‍ನ ಪ್ರಧಾನ ಕಾರ್ಯದರ್ಶಿ ಶಂಕರ್ ಶೆಟ್ಟಿ, ತ್ಯಾಗಂ ಹರೇಕಳ, ಸುರೇಖಾ ಹರೀಶ್ ಪೂಜಾರಿ, ಅಬ್ದುಲ್ ಮತಿನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.