ಸೆ.23 : ಬಹರೈನ್ ದ್ವೀಪರಾಷ್ಟ್ರದ ಕನ್ನಡಿಗರ ಕನಸಿನ ಸೌಧ ಕನ್ನಡ ಭವನ ಉದ್ಘಾಟನೆ

ಬಹರೈನ್ ನ ಸಾವಿರಾರು ಕನ್ನಡಿಗರ ಕನಸಿನ ಕೂಸಾದ “ಕನ್ನಡ ಭವನ “ದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು ಸೆಪ್ಟೆಂಬರ್ 23 ರಂದು ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ. ದ್ವೀಪದ ಹೃದಯ ಭಾಗವಾದ ಮನಾಮಾದಲ್ಲಿ ಕನ್ನಡ ಸಂಘ ಬಹರೈನ್ ನೂತನವಾಗಿ ನಿರ್ಮಿಸಿರುವ ” ಕನ್ನಡ ಭವನ”ವನ್ನು ನ್ನು ಕರ್ನಾಟಕ ಘನ ಸರಕಾರದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಲೋಕಾರ್ಪಣೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಅನುದಾನದಿಂದ ಸುಮಾರು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ನಾಲ್ಕಂತಸ್ತಿನ ಭವನವು ದೇಶದ ಹೊರಗೆ ನಿರ್ಮಾಣಗೊಂಡಿರುವ ಪ್ರಪ್ರಥಮ ಕನ್ನಡ ಭವನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನಾಲ್ಕು ಅಂತಸ್ತಿನ ವಿಶಾಲವಾದ ಭವನದಲ್ಲಿ ಭವ್ಯವಾದ ಸಾಂಸ್ಕ್ರತಿಕ ಸಭಾಂಗಣ, ಸಂಘದ ಕಛೇರಿ ,ಸುಸಜ್ಜಿತ ಗ್ರಂಥಾಲಯ, ಕನ್ನಡ ಕಲಿಕಾ ಕೇಂದ್ರ , ಯೋಗ ತರಬೇತಿ ಕೇಂದ್ರ ಯಕ್ಷಗಾನ ತರಬೇತಿ ಕೇಂದ್ರದ ಜೊತೆಗೆ ವಾಣಿಜ್ಯ ಮಳಿಗೆಗಳನ್ನು ಒಳಗೊಂಡಿದೆ.

ಕನ್ನಡ ಭವನದ ವಿದ್ಯುಕ್ತ ಉದ್ಘಾಟನೆಯು ಇದೆ ತಿಂಗಳ 23ನೇ ತಾರೀಖಿನಂದು ಬೆಳೆಗ್ಗೆ 9 ಘಂಟೆಗೆ ನಡೆದು ಲೋಕಾರ್ಪಣೆಯಾಗಲಿದೆ. ಸಂಜೆ 4:30 ರಿಂದ ಸಾಂಸ್ಕ್ರತಿಕ ಹಾಗು ಸಭಾ ಕಾರ್ಯಕ್ರಮವು ಇಲ್ಲಿನ ಜಿಂಜ್ ನಲ್ಲಿರುವ ನ್ಯೂ ಮಿಲೇನಿಯಮ್ ಶಾಲೆಯ ಕಿಂಗ್ಡಮ್ ಸಭಾಂಗಣದಲ್ಲಿ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪನವರಿಂದ ಶುಭಾಶಂಸನೆಗೈಯಲಿದ್ದು , ಭಾರತದ ರಾಯಭಾರಿ ಶ್ರೀ ಪಿಯೂಷ್ ಶ್ರೀವಾಸ್ತವ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳಾಗಿ ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್ ಹೆಗ್ಡೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ, ಅನಿವಾಸಿ ಕನ್ನಡಿಗರ ವೇದಿಕೆಯ ಮಾಜಿ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್, ವಿಕೆಎಲ್ ಹೋಲ್ಡಿಂಗ್ ಮತ್ತು ಅಲ್ ನಮಾಲ್ ಗ್ರೂಪ್ ಅಧ್ಯಕ್ಷರಾದ ಡಾ.ವರ್ಗೀಸ್ ಕುರಿಯನ್, ವಿಶ್ವವಾಣಿ ದಿನಪತ್ರಿಕೆಯ ಸಂಪಾದಕರಾದ ಶ್ರೀ ವಿಶ್ವೇಶ್ವರ್ ಭಟ್, ಕನ್ನಡಪ್ರಭ ದಿನಪತ್ರಿಕೆ ಮತ್ತು ಸುವರ್ಣ ನ್ಯೂಸ್ ಸಂಪಾದಕರಾದ ಶ್ರೀ ರವಿ ಹೆಗಡೆ, ಬಹರೈನ್ ಕ್ಯಾಪಿಟಲ್ ಗವರ್ನರೇಟ್‍ನ ಮಾಹಿತಿ ಮತ್ತು ಅನುಸರಣೆ ವಿಭಾಗದ ನಿರ್ದೇಶಕರಾದ ಶ್ರೀ ಯುಸುಫ್ ಲೋರಿ, ಉದ್ಯಮಿಗಳಾದ ಶ್ರೀ ಕೆ. ಪ್ರಕಾಶ್ ಶೆಟ್ಟಿ, ಕನ್ನಡಪ್ರಭ ಪುರವಣಿ ಸಂಪಾದಕರೂ, ಲೇಖಕರೂ ಆದ ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ) ಭಾಗವಹಿಸಲಿದ್ದಾರೆ.ಕನ್ನಡ ಸಂಘದ ಪ್ರತಿಭಾವಂತ ಕಲಾವಿದರುಗಳಿಂದ ನಾಡಿನ ಶ್ರೀಮಂತ ಕಲೆಗಳು ನ್ರತ್ಯ ,ಹಾಡು,ರೂಪಕಗಳೊಂದಿಗೆ ಅನಾವರಣಗೊಳ್ಳಲಿದೆ .

ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ, ಶ್ರೀ ವಿ ಕೆ ರಾಜಶೇಖರನ್ ಪಿಳ್ಳೈ, ಅಧ್ಯಕ್ಷರು, ನ್ಯಾಷನಲ್ ಗ್ರೂಪ್ ಆಫ್ ಕಂಪನಿಗಳು; ಶ್ರೀ ಕೆ. ಮೋಹನ್‍ದೇವ್ ಆಳ್ವ, ಅಧ್ಯಕ್ಷರು -ಅಖಿಲ ಕರ್ನಾಟಕ ಮಕ್ಕಳ ಕೂಟ; ಶ್ರೀ ಆನಂದ ಭಟ್, ಉದ್ಯಮಿ, ಬೆಂಗಳೂರು; ಶ್ರೀ ಕೆ ಜಿ ಬಾಬುರಾಜನ್, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಬಿಕೆಜಿ ಹೋಲ್ಡಿಂಗ್, ಬಹ್ರೇನ್, ಕತಾರ್ ಮತ್ತು ಒಮಾನ್; , ಸಾರಾ ಗ್ರೂಪ್ ನ ಆಡಳಿತ ನಿರ್ದೇಶಕರಾದ ಶ್ರೀ ಮೊಹಮ್ಮದ ಮನ್ಸೂರ್ ; ಶ್ರೀ ವಕ್ವಾಡಿ ಪ್ರವೀಣ್ ಶೆಟ್ಟಿ, ಅಧ್ಯಕ್ಷರು, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್, ಯುಎಇ; ಶ್ರೀ ನವೀನ್ ಡಿ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರು, ಔಮಾ ಮಿಡಲ್ ಈಸ್ಟ್; ಮತ್ತು ಶ್ರೀ ನವೀನ್ ಕುಮಾರ್ ಶೆಟ್ಟಿ, ರಿಫಾ ಇವರ ಉಪಸ್ಥಿತಿ ಈ ಕಾರ್ಯಕ್ರಮದ್ಲಲಿರುವುದು.

ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು ಪತ್ರಿಕಾಗೋಷ್ಠಿಯಲ್ಲಿ ವಿ4 ನ್ಯೂಸ್‍ನೊಂದಿಗೆ ವಿಶೇಷವಾಗಿ ಮಾತನಾಡಿ ಬಹರೈನ್ ನ ಎಲ್ಲಾ ಕನ್ನಡಿಗರಿಗೆ ಇದು ಹೆಮ್ಮೆಯ ಕ್ಷಣವಾಗಿದೆ ಇಂದು ನಮ್ಮ ಬಹುಕಾಲದ ಕನಸು ಈಡೇರುತ್ತಿದೆ. ಕನ್ನಡ ಭವನವು ಕನ್ನಡಿಗ ಸಮುದಾಯದ ಪ್ರತಿಷ್ಠಿತ ಯೋಜನೆಯಾಗಿದ್ದು, ಬಹ್ರೈನ್‍ನಲ್ಲಿ ನೆಲೆಸಿರುವ 25,000 ಕ್ಕೂ ಹೆಚ್ಚು ಕನ್ನಡಿಗರ ಆಶೋತ್ತರಗಳನ್ನು ಪೂರೈಸಲು ಮತ್ತು ಉತ್ತಮ ಸೇವೆ ನೀಡಲು ಸಹಾಯ ಮಾಡುತ್ತದೆ ಎಂದರು.

ಕನ್ನಡ ಭವನ ಕಟ್ಟಡ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಆಸ್ಟಿನ್ ಸಂತೋಷ್ ಕುಮಾರ್ ಹಳೆಯಂಗಡಿ ಮಾತನಾಡಿ ನೂತನವಾಗಿ ನಿರ್ಮಿಸಲ್ಪಟ್ಟ ಕನ್ನಡ ಭವನದ ಉದ್ಘಾಟನೆಯೊಂದಿಗೆ ಸದಸ್ಯರ ಬಹುಕಾಲದ ಕನಸು ನನಸಾಗುತ್ತಿದೆ ಎಂದರು.

ಈ ಕಾರ್ಯಕ್ರಮಕ್ಕೆ ದ್ವೀಪ ರಾಷ್ಟ್ರದ ಎಲ್ಲಾ ಕನ್ನಡಿಗರಿಗೂ ಮುಕ್ತ ಪ್ರವೇಶವಿದ್ದು ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿಯವರನ್ನು ದೂರವಾಣಿ ಸಂಖ್ಯೆ 39147114 ಮುಖೇನ ಸಂಪರ್ಕಿಸಬಹುದು.

Related Posts

Leave a Reply

Your email address will not be published.