ಬಂಟರ ನಿಗಮ ಸ್ಥಾಪನೆ, 2ಎ ವರ್ಗಕ್ಕೆ ಸೇರ್ಪಡೆ ಮಾಡದ ಸರ್ಕಾರ : ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ : ಬಂಟರ ಸಂಘಗಳ ಒಕ್ಕೂಟದಿಂದ ಎಚ್ಚರಿಕೆ

ಬಂಟರ ಯಾನೆ ನಾಡವರ ಅಭಿವೃದ್ಧಿ ನಿಗಮ ಸ್ಥಾಪನೆ, ಸಮುದಾಯವನ್ನು 3ಬಿ ಯಿಂದ 2ಎಗೆ ವರ್ಗಾಯಿಸುವ ಭರವಸೆ ಈಡೇರಿಸದ ರಾಜ್ಯ ಸರಕಾರಕ್ಕೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ತಿಳಿಸಿದೆ.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, ಬಂಟರ ನಿಗಮ ಸ್ಥಾಪನೆ ಮಾಡಬೇಕು, ಬಂಟ ಸಮುದಾಯವನ್ನು 2ಎ ವರ್ಗಕ್ಕೆ ವರ್ಗಾಯಿಸಬೇಕು ಮೊದಲಾದ ಬೇಡಿಕೆಗಳ ಈಡೇರಿಕೆಗೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದಿದ್ದೇವೆ, 2 ವರ್ಷಗಳ ಹಿಂದೆಯೂ ಸಿಎಂಗೆ ಮನವಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಸಂಸದ ನಳಿನ್ ಮುಖಾಂತರ ಬೊಮ್ಮಾಯಿ ಅವರನ್ನು ಭೇಟಿ ಮಾಡಲಾಗಿತ್ತು. ಆಗ ಕೂಡ ಬೇಡಿಕೆ ಈಡೇರಿಸುವ ಆಶ್ವಾಸನೆ ನೀಡಿದ್ದರು. ಆದರೆ ಈಡೇರಿಲ್ಲ, ಬಂಟ ಸಮುದಾಯದವರೇ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರೆ. ಸಮುದಾಯದ ಐವರು ಶಾಸಕರಿದ್ದರೆ. ಸರಕಾರ ಕೂಡಲೇ ಸ್ಪಂದಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಉತ್ತರ ನೀಡಲಾಗುವುದು. ಪ್ರತೀ ಕ್ಷೇತ್ರದಲ್ಲಿಯೂ ಬಂಟ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ನಮಗೆ ಜಾತಿ , ಮತ, ಪಕ್ಷಭೇಧವಿಲ್ಲ ವೈಯಕ್ತಿಕವಾಗಿಯೂ ಕೋಪವಿಲ್ಲ ನಮ್ಮ ಬೇಡಿಕೆಗೆ ಸ್ಪಂದಿಸುವವರಿಗೆ ಬೆಂಬಲ ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ, ಬಿ. ನಾಗರಾಜ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಧರ ರೈ ಬಾಲ್ಯೊಟ್ಟು, ಪುಣೆ ಸಂತೋಷ್ ಕುಮಾರ್ ಶೆಟ್ಟಿ ಮೋದಲಾದ ಬಂಟರ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು.