ಚುನಾವಣೆ ಜಾಗೃತಿ : ಬಣ್ಣದ ಚಿತ್ರಗಳಿಂದ ಸೆಳೆಯುವ ಮತಗಟ್ಟೆಗಳು
ಬಂಟ್ವಾಳ: ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ತಯಾರಿಯನ್ನು ಆರಂಭಿಸಿದೆ. ಇತ್ತ ಚುನಾವಣೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ದ.ಕ. ಜಿಲ್ಲಾಡಳಿತವೂ ಕಾಯೋನ್ಮುಖವಾಗಿದ್ದು ಆಯ್ದ ಮತಗಟ್ಟೆಗಳಲ್ಲಿ(ಶಾಲೆಗಳಲ್ಲಿ) ಬಣ್ಣದ ಚಿತ್ರಗಳನ್ನು ರಚಿಸಿ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಹೊಸ ಪ್ರಯತ್ನ ನಡೆಸಿದೆ.
ಕರಾವಳಿಯ ಜಾನಪದ ಕಲೆಗಳಾದ ಯಕ್ಷಗಾನ, ಕಂಬಳ ಸೇರಿದಂತೆ ಪರಂಪರೆ ಮತ್ತು ಸಂಸ್ಕೃತಿ, ಗೋಗ್ರೀನ್, ನೀಲ ತರಂಗ, ಯುವ, ಸಖಿ, ವಿಕಲಚೇತನ ಈ ಎಂಟು ಪರಿಕಲ್ಪನೆಯಡಿ ಮತಗಟ್ಟೆ ಕೇಂದ್ರಳಾಗಿರುವ ಶಾಲೆಗಳನ್ನು ಬಣ್ಣದ ಚಿತ್ರಗಳಿಂದ ಅಲಂಕರಿಸುವ ಕಾರ್ಯ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 100 ಮತಗಟ್ಟೆಗಳನ್ನು ಚಿತ್ರಗಳಿಂದ ಅಲಂಕರಿಸುವ ಯೋಜನೆ ರೂಪಿಸಿರುವುದಾಗಿ ದ.ಕ. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯದರ್ಶಿ ಡಾ. ಕುಮಾರ್ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ 13 ಶಾಲೆಗಳು:
ಬಂಟ್ವಾಳ ತಾಲೂಕಿನ 13 ಶಾಲೆಗಳಲ್ಲಿನ ಮತಗಟ್ಟೆಗಳಲ್ಲಿ ಬಣ್ಣದ ಚಿತ್ರಗಳನ್ನು ಚಿತ್ರಕಲಾ ಶಿಕ್ಷಕರಿಂದ ಪಡಿಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಾಲೂಕಿನ ಕೆದ್ದಳಿಕ ಸ.ಹಿ.ಪ್ರಾ. ಶಾಲೆಯಲ್ಲಿ ಯಕ್ಷಗಾನ ಮತಗಟ್ಟೆ, ನರಿಕೊಂಬು ಸ. ಹಿ. ಪ್ರಾ. ಶಾಲೆಯಲ್ಲಿ ನೀಲ ತರಂಗ ಮತಗಟ್ಟೆ, ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ ಹಾಗೂ ಸ.ಹಿ. ಪ್ರಾ. ಶಾಲೆ ಕಕ್ಕೆಪದವು ಉಳಿಯಲ್ಲಿ ಕಂಬಳ ಮತಗಟ್ಟೆ, ಸರಕಾರಿ ಪ್ರೌಢಶಾಲೆ ಪೆÇಳಲಿಯಲ್ಲಿ ಪರಂಪರೆ ಮತ್ತು ಸಂಸ್ಕೃತಿ ಮತಗಟ್ಟೆ, ಸ.ಹಿ.ಪ್ರಾ. ಶಾಲೆ ಅನಂತಾಡಿಯಲ್ಲಿ ಗೋ ಗ್ರೀನ್ ಮತಗಟ್ಟೆ, ಸರಕಾರಿ ಮಾದರಿ ಹಿ.ಪ್ರಾ. ಶಾಲೆ ಕಲ್ಲಡ್ಕದಲ್ಲಿ ಯುವ ಮತಗಟ್ಟೆ, ಸ. ಹಿ.ಪ್ರಾ. ಶಾಲೆ ಮಾಣಿ, ನೇರಳಕಟ್ಟೆ, ಹಾಗೂ ಸರಕಾರಿ ಪ್ರೌಢಶಾಲೆ ಬೆಂಜನಪದವಿನಲ್ಲಿ ಸಖಿ ಮತಗಟ್ಟೆ, ಸ.ಹಿ. ಪ್ರಾ. ಶಾಲೆ ಕೊಯಿಲಾ, ಶೇರಾ ಹಾಗೂ ಮಜಿ ಶಾಲೆಯಲ್ಲಿ ವಿಕಲಚೇತನ ಮತಗಟ್ಟೆ ಎಂದು ಗುರುತಿಸಲಾಗಿದ್ದು ಆ ಪರಿಕಲ್ಪನೆಯ ಚಿತ್ರಗಳು ಮೂಡಿಬರಲಿದೆ.
ಚಿತ್ರಕಲಾ ಶಿಕ್ಷಕರ ತಂಡ:
ಮತಗಟ್ಟೆ ಕೇಂದ್ರಗಳಲ್ಲಿ ತಾಲೂಕಿನ ವಿವಿಧ ಶಾಲೆಡಗಳ ಚಿತ್ರಕಲಾ ಶಿಕ್ಷಕರ ತಂಡ ಚಿತ್ರ ಬಿಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕೆದ್ದಳಿಕೆ ಮತ್ತಿತರ ಮತಗಟ್ಟೆಗಳಲ್ಲಿ ಈಗಾಗಲೇ ಚಿತ್ರ ಬಿಡಿಸುವ ಕಾರ್ಯ ಪೂರ್ಣಗೊಂಡಿದೆ. ಎಪ್ರಿಲ್ 10ರವರೆಗೆ ಮತಗಟ್ಟೆಗಳನ್ನು ಚಿತ್ರಗಳಿಂದ ಅಲಂಕರಿಸುವ ಕಾರ್ಯ ನಡೆಯಲಿದೆ.