ಅಡಕೆ ಬೆಳೆಯಲ್ಲಿ ಬಿಳಿಚುಕ್ಕಿ ರೋಗ : ವೈಜ್ಞಾನಿಕ ಕಾರಣ ಪತ್ತೆ ಹಚ್ಚಿ ನಿವಾರಣೆಗೆ ಕ್ರಮ : ಕುಂದಾಪುರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ

ಕುಂದಾಪುರ: ಅಡಕೆ ಬೆಳೆಯಲ್ಲಿ ಬಿಳಿಚುಕ್ಕೆ ರೋಗ ಕಾಣಿಸಿಕೊಳ್ಳುತ್ತಿದ್ದು, ಕೃಷಿಕರು ಆತಂಕದಲ್ಲಿದ್ದಾರೆ. ಈ ರೋಗದ ಬಗ್ಗೆ ಕೃಷಿ ವಿಶ್ಯವಿದ್ಯಾಲಯ ಹಾಗೂ ಕೇಂದ್ರ ಸರ್ಕಾರದ ತಂಡ ಪರಿಶೀಲನೆ ನಡೆಸುತ್ತಿದ್ದು, ವೈಜ್ಞಾನಿಕವಾದ ಕಾರಣವನ್ನು ಪತ್ತೆ ಹಚ್ಚಿ ಬಳಿಕ ಅದರ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ರೋಗ ಹರಡದಂತೆ ವಿಜ್ಞಾನಿಗಳು ತಿಳಿಸಿರುವ ಔಷಧಿಯ ಸಿಂಪಡನೆ ಕಾರ್ಯಕ್ಕೆ ಸರ್ಕಾರ ಸಹಕಾರ ನೀಡಲಿದೆ. ಮೂಲರೋಗವನ್ನು ಪತ್ತೆಹಚ್ಚಿ ಅದರ ನಿವಾರಣೆಗೆ ಔಷಧಿಯನ್ನೂ ಸಿಂಪಡನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಅವರು ಮುಳ್ಳಿಕಟ್ಟೆಯಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ಕರಾವಳಿ ಭಾಗದಲ್ಲಿ ಕುಚಲಕ್ಕಿಯನ್ನು ಪಡಿತರದಲ್ಲಿ ವಿತರಿಸಲು ರೈತರಿಂದ ಕುಚಲಕ್ಕಿಯನ್ನು ಖರೀದಿಸಲು ಖರೀದಿ ಕೇಂದ್ರವನ್ನು ಸಧ್ಯದಲ್ಲಿಯೇ ಪ್ರಾರಂಭಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ 103 ನೇ ಸಂವಿಧಾನ ತಿದ್ದುಪಡಿಗೆ ಸರ್ವೋಚ್ಛ ನ್ಯಾಯಾಲಯ 3:2 ಬಹುಮತದ ತೀರ್ಪನ್ನು ನೀಡಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ 10% ಮೀಸಲಾತಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರ ಆಶಾಕಿರಣವಾಗಿದೆ. ಯಾವುದೇ ಮೀಸಲಾತಿಯಿಲ್ಲದೇ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಸಮುದಾಯಗಳಿಗೆ ದೊರೆತಿರುವ ಈ ಅವಕಾಶವನ್ನು ಬಳಸಿಕೊಂಡು ಸಮುದಾಯಗಳು ಅಭಿವೃದ್ಧಿಯನ್ನು ಹೊಂದಲು ಈ ತೀರ್ಪು ಅನುಕೂಲ ಕಲ್ಪಿಸಲಿದೆ.

ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಅಭ್ಯಾಸ ಮಾಡಿಸುವ ಅಪಸ್ಪರ ಏಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾವುದೇ ಒಳ್ಳೆಯ ಕ್ರಮ ತೆಗೆದುಕೊಳ್ಳಬೇಕಾದರೆ ಅದರ ಪರ ಮತ್ತು ವಿರೋಧ ಅಭಿಪ್ರಾಯಗಳು ಸಹಜ. ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Related Posts

Leave a Reply

Your email address will not be published.