ದಲಿತ ಮಹಿಳೆಗೆ ಸೇರಿರುವ ಎರಡು ಎಕರೆ ಭೂಮಿ ಕಬಳಿಸಿದ ಆರ್ಟ್ ಆಫ್ ಲೀವಿಂಗ್ ಆಶ್ರಮ: ಸಮತಾ ಸೈನಿಕ ದಳದಿಂದ ಬೃಹತ್ ಹೋರಾಟದ ಎಚ್ಚರಿಕೆ

ಬೆಂಗಳೂರು; ಆರ್ಟ್ ಆಫ್ ಲೀವಿಂಗ್ ನ ಶ್ರೀ ರವಿಶಂಕರ್ ಗುರೂಜಿ ಆಶ್ರಮದಿಂದ ದಲಿತ ವೃದ್ಧ ಮಹಿಳೆಗೆ ಸೇರಿದ ಎರಡು ಎಕರೆ ಭೂಮಿ ಕಬಳಿಸಿದ್ದು, ಇದನ್ನು ವಿರೋಧಿಸಿ ಕನಕಪುರ ರಸ್ತೆಯ ಉದಿಪಾಳ್ಯ ಆಶ್ರಮದ ಮುಂದೆ ಇದೇ 29 ರಂದು ಭಾರೀ ಪ್ರತಿಭಟನೆ ನಡೆಸುತ್ತಿದ್ದು, ನ್ಯಾಯ ಸಿಗುವ ತನಕ ಹೋರಾಟ ಮುಂದುವರೆಸುವುದಾಗಿ ಸಮತಾ ಸೈನಿಕ ದಳ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೈನಿಕ ದಳದ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಆರ್ ಚಂದ್ರಶೇಖರ್, ಬೆಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷ ಎಸ್ ಕೆಂಚಯ್ಯ, ಬೆಂಗಳೂರು ದಕ್ಷಿಣ ವಿಭಾಗದ ಪ್ರಧಾನ ಕಾರ್ಯದರ್ಶಿ ಜಿ.ಕೆ. ಗೋಪಾಲ್ ಅವರುಗಳು, ತಿಂಗಳ 29 ರ ಒಳಗಾಗಿ ಆಶ್ರಮದಿಂದ ಲಕ್ಷ್ಮೀಪುರದ ದಿವಂಗತ ಹನುಮಯ್ಯನ ಹೊಣೆಯ 70 ವರ್ಷ ವಯೋವೃದ್ಧ ದಲಿತ ಮಹಿಳೆ ರಂಗಮ್ಮನಿಗೆ ಸೇರಿರುವ ಸರ್ವೇ ನಂ 132/62 ರ 2 ಎಕರೆ ಜಮೀನನ್ನು ಬೇನಾಮಿ ಹೆಸರುಗಳನ್ನು ಸೃಷ್ಠಿಸಿ ಕಬಳಿಸಿರುವುದನ್ನು ಬಿಟ್ಟುಕೊಡಬೇಕು. ಈ ಪ್ರಕರಣವನ್ನು ಸಮತಾ ಸೈನಿಕ ದಳ ಗಂಭೀರವಾಗಿ ಪರಿಗಣಿಸಿದೆ. ದಲಿತರ ಭೂಮಿ ಬಿಟ್ಟುಕೊಡಬೇಕೆಂದು ಶ್ರೀ ರವಿಶಂಕರ್ ಗುರೂಜಿ ಅವರಿಗೆ ಕಳೆದ ತಿಂಗಳ 13 ರಂದು ಪತ್ರ ಬರೆದು ಖುದ್ದಾಗಿ ಒತ್ತಾಯಿಸಿದ್ದೇವೆ. ಅಶ್ರಮದ ವಕ್ತಾರರೊಂದಿಗೆ ಭೂಮಿ ಬಿಟ್ಟುಕೊಡುವಂತೆ ಚರ್ಚಿಸಿದ್ದು, ಇದೂ ಕೂಡ ಫಲಪ್ರದವಾಗಿಲ್ಲ. ಹೀಗಾಗಿ ರಂಗಮ್ಮನಿಗೆ ನ್ಯಾಯ ದೊರೆಯುವ ಸಾಧ್ಯತೆಗಳಿಲ್ಲ. ಆದ್ದರಿಂದ ಹೋರಾಟ ಆರಂಭಿಸುತ್ತಿದ್ದೇವೆ ಎಂದರು.

‘ದಿ ಆರ್ಟ್ ಆಫ್ ಲೀವಿಂಗ್’ ಎಂಬ `ಜೀವನ ಕಲೆ’ ಹೆಸರಿನಲ್ಲಿ ಅಪಾರ ಸಂಪತ್ತು ಸೃಷ್ಟಿಸಿಕೊಂಡಿರುವ ಶ್ರೀ ರವಿಶಂಕರ್ ಗುರೂಜಿ ಭೂಮಿ ಕಬಳಿಕೆಯನ್ನು ಸಹ ಕಲೆಯನ್ನಾಗಿ ಕರಗತಮಾಡಿಕೊಂಡಿದ್ದಾರೆ. ಉದೀಪಾಳ್ಯ ಮತ್ತಿತರ ಆಸುಪಾಸಿನ ಗ್ರಾಮಗಳ ಮೂಲ ನಿವಾಸಿಗಳ ಬದುಕನ್ನು ಬೀದಿಪಾಲು ಆಶ್ರಮ ಮಾಡಿದೆ. ಸರ್ಕಾರದಿಂದ ಮಂಜೂರಾದ ಭೂಮಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನೂರಾರು ದಲಿತ ಕುಟುಂಬಗಳನ್ನು ಅಶ್ರಮ ಬೀದಿಪಾಲು ಮಾಡಿತ್ತು. ಮೊದಲ ಬಾರಿಗೆ ಹತ್ತು ವರ್ಷಗಳ ಹಿಂದೆಯೇ ಅಶ್ರಮದ ಎದುರು ಭಾರೀ ಪ್ರತಿಭಟನೆ ನಡೆಸಿ ಕಂದಾಯ ಇಲಾಖೆಯ ಅಧಿಕಾರಿಗಳ ಮೂಲಕ ಹತ್ತಾರು ಮೂಲ ವಾರಸುದಾರರಿಗೆ ಭೂಮಿ ವಾಪಸ್ ಕೂಡಿಸಿದ್ದೇವೆ. ಇದೀಗ ದಲಿತರಿಗೆ ಸರ್ಕಾರ ಮತ್ತು ಪೊಲೀಸರು ರಕ್ಷಣೆ ನೀಡಬೇಕು ಎಂದು ಹೇಳಿದರು.

Related Posts

Leave a Reply

Your email address will not be published.