ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಸಚಿವ ಬೈರತಿ ಬಸವರಾಜ್ ಭೇಟಿ

ಸುಬ್ರಹ್ಮಣ್ಯ, ನ.20: ಒಂಬತ್ತು ಸಾವಿರ ಕೋಟಿ ರೂಪಾಯಿಗಳನ್ನು ನಮ್ಮ ಸರಕಾರ ಅಭಿವೃದ್ಧಿಗೆ ಇರಿಸಿದೆ. ಸರಕಾರದ ಸಂಕಲ್ಪ ದಾಹಮುಕ್ತ ಕರ್ನಾಟಕ ಮಾಡಬೇಕೆಂಬುದು. ಮುಂದಿನ ಎರಡು ಮೂರು ತಿಂಗಳಲ್ಲಿ ಅದನ್ನು ಕಾರ್ಯಗತ ಗೊಳಿಸಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದರು. ಅವರು ರವಿವಾರ ರಾತ್ರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ನಗರಾಭಿವೃದ್ಧಿ ಇಲಾಖೆ ವತಿಯಿಂದ ರಾಜ್ಯದಲ್ಲಿ ಪೂರಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದರು.

ನಮ್ಮ ಸರಕಾರ ಧರ್ಮಸ್ಥಳಕ್ಕೆ 25 ಕೋಟಿ ರೂಪಾಯಿ ಅನುದಾನ ಕುಡಿಯುವ ನೀರಿನ ಯೋಜನೆಗೆ ನೀಡಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೂ ಒಳಚರಂಡಿ ವ್ಯವಸ್ಥೆ ಬೇಕು ಎಂದು ಸಚಿವ ಎಸ್.ಅಂಗಾರ ಅವರು ಕೇಳಿಕೊಂಡಿದ್ದಾರೆ. ಮುಂದಿನ ಒಂದುವರೆ ತಿಂಗಳೊಳಗೆ ಕುಕ್ಕೆಗೆ ಬೇಕಾಗಿರುವ ಒಳಚರಂಡಿ ವ್ಯವಸ್ಥೆಗೆ ಕಲ್ಪಿಸಿಕೊಡುವ ಭರವಸೆ ನೀಡಿದ ಅವರು ಅನುದಾನ ಬಿಡುಗಡೆಗೊಂಡಿದೆ ಈ ಬಗ್ಗೆ ವರದಿ ತರಿಸಿ ಯೋಜನೆ ರೂಪಿಸಲಾಗುವುದು ಎಂದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‍ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸದಸ್ಯರಾದ ಪ್ರಸನ್ನ ದರ್ಬೆ, ಲೋಕೇಶ್, ಪಿ.ಜಿ.ಎಸ್.ಎನ್.ಪ್ರಸಾದ್, ಶೋಭಾಗಿರಿಧರ್, ವನಜಾ ಭಟ್, ಮಾಸ್ಟರ್ ಪ್ಲಾನ್‍ನ ಮನೋಜ್, ಬಿಜೆಪಿ ಮುಖಂಡ ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ದೇವಳದ ಶಿಷ್ಠಾಚಾರ ವಿಭಾಗದ ಜಯರಾಮ ರಾವ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಕ್ಕೆಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಸಚಿವರು ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು, ಬಳಿಕ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಳದಿಂದ ನಡೆಯುವ ಅನ್ನದಾನಕ್ಕೆ ರೂ.25 ಸಾವಿರ ದೇಣಿಗೆಯನ್ನು ಸಚಿವರು ನೀಡಿದರು.

Related Posts

Leave a Reply

Your email address will not be published.