ಬೈಂದೂರು : ಅಕ್ರಮ-ಸಕ್ರಮ ಅರ್ಜಿ ಅಧಿಕಾರಿಗಳ ಹಂತದಲ್ಲಿ ತಿರಸ್ಕಾರ ಮಾಡಕೂಡದು – ಶಾಸಕ ಗುರುರಾಜ್ ಗಂಟಿಹೊಳೆ
ಬೈಂದೂರು : ಅಕ್ರಮ- ಸಕ್ರಮ ( ಬಗರ್ ಹುಕುಂ ) ಸಮಿತಿಯ ಅವಗಾಹನೆಗೆ ತರದೇ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಅರ್ಜಿ ತಿರಸ್ಕರಿಸುವುದು ಅಥವಾ ವಿಲೇವಾರಿ ಮಾಡುವಂತಿಲ್ಲ. ಸಮಿತಿಯ ಮುಂದೆ ತಂದು ಅಕ್ರಮ-ಸಕ್ರಮಕ್ಕೆ ಸಮಿತಿಯ ಸೂಚನೆಯಂತೆ ನಿರ್ಧರಿಸಬೇಕು.ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಲ್ಲಿ ಬಹುದೊಡ್ಡ ಹೋರಾಟ ರೂಪಿಸಬೇಕಾಗುತ್ತದೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಎಚ್ಚರಿಕೆ ನೀಡಿದ್ದಾರೆ.
ಕಾಡಿನಂಚಿನ ಗ್ರಾಮಗಳಲ್ಲಿ ಕಳೆದ ಅನೇಕ ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿರುವವರು ಹಕ್ಕುಪತ್ರಕ್ಕಾಗಿ ಅಕ್ರಮ-ಸಕ್ರಮದಡಿ ಅರ್ಜಿ ಸಲ್ಲಿಸಿರುತ್ತಾರೆ. ನಮೂನೆ 50, ನಮೂನೆ 53 ಹಾಗೂ ಇತ್ತೀಚೆಗೆ ನಮೂನೆ 57ರ ಅಡಿ ಅರ್ಜಿ ಸಲ್ಲಿಸಿದ್ದಾರೆ. ಮೂರು ನಮೂನೆಗಳಲ್ಲಿಯೂ ಅರ್ಜಿ ಸಲ್ಲಿಸಿರಬಹುದು ಅಥವಾ ಯಾವುದಾದರು ಒಂದು ನಮೂನೆಯಡಿ ಅರ್ಜಿ ಸಲ್ಲಿಕೆ ಆಗಿರಬಹುದು. ಎಲ್ಲವನ್ನು ಸಮಿತಿಯ ಮುಂದೆ ತಂದು ಪರಿಶೀಲಿಸಿ ಅಂತಿಮ ಪುರಸ್ಕಾರ ಅಥವಾ ತಿರಸ್ಕಾರ ಪ್ರಕ್ರಿಯೆ ನಡೆಯಬೇಕು. ಅಧಿಕಾರಿಗಳೇ ಏಕಾಏಕಿ ನಿರ್ಧಾರ ತೆಗೆದುಕೊಳ್ಳುವುದಾದರೆ ಸಮಿತಿಗಳನ್ನು ಸರ್ಕಾರ ಯಾಕೆ ರಚನೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಅರ್ಜಿ ತಿರಸ್ಕರಿಸಿರುವ ವರದಿ ಕೇಳಿ ಬರುತ್ತಿದೆ. ಇದು ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ತೋರಿಸುತ್ತದೆ.
ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಕರಾವಳಿ, ಮಲೆನಾಡು ಭಾಗಗಳ ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಸಮಿತಿ ರಚನೆ ಮಾಡಲಾಗಿದೆ. ಅರ್ಜಿಯ ಅಂಗೀಕಾರ ಅಥವಾ ತಿರಸ್ಕಾರ ಈ ಸಮಿತಿಯಲ್ಲೇ ಆಗಬೇಕು. ಆದರೆ ಅಧಿಕಾರಿಗಳು ಈ ವಿಚಾರವನ್ನು ಸಭೆಯಲ್ಲಿ ಚರ್ಚಿಸದೇ ಏಕಪಕ್ಷೀಯವಾಗಿ ನಿರಾಕರಿಸುತ್ತಿರುವುದು ಸಂವಿಧಾನ ಬಾಹಿರ ಎಂದು ಆರೋಪಿಸಿದ್ದಾರೆ.
ಹಲವು ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರು ಅಧಿಕಾರಿಗಳ ನಿರ್ಧಾರದಿಂದ ಕಂಗಾಲಾಗಿದ್ದಾರೆ. ಅರ್ಜಿ ತಿರಸ್ಕರಿಸುವಾಗ ಅಧಿಕಾರಿಗಳು ರೈತರ ಹೇಳಿಕೆಯನ್ನೂ ದಾಖಲಿಸಿಕೊಳ್ಳುತ್ತಿಲ್ಲ. ಇಂಥ ಏಕಪಕ್ಷೀಯ ನಡವಳಿಕೆ ತಕ್ಷಣ ನಿಲ್ಲಿಸಿ ರೈತರಿಗೆ ನ್ಯಾಯ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರಕಟನೆ ಮೂಲಕ ಎಚ್ಚರಿಕೆ ನೀಡಿದ್ದಾರೆ.