ಕೆಟ್ಟ ನಡತೆಗಾಗಿ ಮನೆ ಕಾಲಿ ಮಾಡುವಂತೆ ತಂದೆ ಮಗನಿಗೆ ನೋಟೀಸು ನೀಡಿದ್ದರು. ಕೋರ್ಟಿನಲ್ಲಿ ಸೋಲುತ್ತಲೇ ಮಗ ರಸ್ತೆಯಲ್ಲೇ ತಂದೆಯನ್ನು ಕೊಂದು ಕಳೆದಿದ್ದಾನೆ.
ಎಂಬತ್ತೆರಡರ ಪ್ರಾಯದ ಜಾಫರ್ ಪಟೇಲ್ರನ್ನು ಅವರ ಮಗ ಅಬ್ದುಲ್ ರೆಹಮಾನ್ ರಸ್ತೆಯಲ್ಲಿ ಚಾಕುವಿನಿಂದ ಇರಿದು ಮುಗಿಸಿದ್ದಾನೆ.

ಈ ಘಟನೆಯು ಮಹಾರಾಷ್ಟ್ರದ ಔರಂಗಾಬಾದ್ ಇಲ್ಲವೇ ಛತ್ರಪತಿ ಸಂಬಾಜಿನಗರದಲ್ಲಿ ನಡೆದಿದೆ. ಮಗನ ನಡತೆ ಸರಿಯಿಲ್ಲ ಎಂದು ಮನೆ ಬರಿದು ಮಾಡುವಂತೆ ತಂದೆ ನೋಟೀಸು ನೀಡಿದ್ದರು. ಮನೆ ತಂದೆಯ ಸ್ವಂತ ಸಂಪಾದನೆಯಾದ್ದರಿಂದ ಜಿಲ್ಲಾ ಕೋರ್ಟು ಮಗನಿಗೆ ಮನೆ ಬಿಡುವಂತೆ ತೀರ್ಪು ನೀಡಿತು. ಕೋರ್ಟಿನಿಂದ ರಿಕ್ಷಾದಲ್ಲಿ ಮನೆಗೆ ಹೊರಟಿದ್ದ ಜಾಫರ್ ಪಟೇಲ್ರನ್ನು ಅಬ್ದುಲ್ ರೆಹಮಾನ್ ಕೆಳಕ್ಕೆಳೆದು ಇರಿದು ಸಾಯಿಸಿದ್ದಾನೆ.

ಜಾಫರ್ ಕಮರುದ್ಧೀನ್ ಸಯ್ಯದ್ ಪಟೇಲ್ ಜಲಸಂಪನ್ಮೂಲ ಇಲಾಖೆಯಲ್ಲಿ ಕೆಲಸದಲ್ಲಿದ್ದು ನಿವೃತ್ತರಾದವರು. ಮಗನ ನಡತೆಗೆ ರೋಸಿ ಮನೆಯಿಂದ ಕಳಿಸಲು ಎರಡು ವರುಷ ಕೋರ್ಟಿನಲ್ಲಿ ಹೋರಾಡಿದ್ದರು. ಆದರೆ ನ್ಯಾಯಾಲಯದಲ್ಲಿ ಗೆದ್ದು ಹೊರಬಂದವರು ಮಗನಿಂದಲೇ ಹತರಾಗಿದ್ದಾರೆ.

ಮದ್ದು ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಮಗ, ಮನೆಯಲ್ಲಿ ಎಲ್ಲರೊಡನೆ ಜಗಳವಾಡುತ್ತಿದ್ದನಲ್ಲದೆ, ಹಿರಿಯರ ಮೇಲೆ ಹಲ್ಲೆ ಕೂಡ ಮಾಡಿದ್ದ. ಮಗನಿಗೆ ಮನೆ ಬಿಡುವಂತೆ ನೋಟೀಸು ನೀಡಿ ಜಾಫರ್ ಪಟೇಲ್ ಪುಣೆಯ ಮಗಳ ಮನೆಯಲ್ಲಿ ವಾಸಿಸುತ್ತಿದ್ದರು. ರಿಕ್ಷಾದಲ್ಲಿ ಅಪ್ಪನ ಜೊತೆಗಿದ್ದ ಮಗಳು ಕೂಡ ಗಾಯಗೊಂಡಿದ್ದಾರೆ.


