ಪಾಂಗಳ: ಆರ್ಯಾಡಿ ಶ್ರೀ ಜನಾರ್ಧನ ದೇವರ ಸನ್ನಿಧಿಯಲ್ಲಿ ನಡೆಯಲಿರುವ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಮೂರು ದಶಕಗಳ ಹಿಂದೆ ಸೌಹಾರ್ದತೆ, ಭಕ್ತಿ, ಸಾಮರಸ್ಯ ಹಾಗೂ ಸಹಬಾಳ್ವೆಯ ಮೂಲಕ ಗ್ರಾಮ ಮತ್ತು ರಾಷ್ಟ್ರದ ಅಭಿವೃದ್ಧಿ ಹಾಗೂ ಐಕ್ಯತೆಗೆ ಕೊಡುಗೆ ನೀಡುವ ಉದ್ದೇಶದಿಂದ ಅಂದಿನ ಹಿರಿಯರಾದ ಶ್ರೀ ರಾಜಗೋಪಾಲ್ ರಾವ್, ಶ್ರೀನಿವಾಸ್ ಭಟ್, ಶ್ರೀರಂಗರಾವ್, ಹರೀಶ್ ಶೆಟ್ಟಿ ಪಾಂಗಳ, ರಿಕ್ಷಾ ಚಾಲಕರು ಮತ್ತು ಮಾಲಕರು ಸೇರಿದಂತೆ ಊರಿನ ಹಿರಿಯರು ಹಾಗೂ ಗಣ್ಯರ ಮಾರ್ಗದರ್ಶನದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆರಂಭಗೊಂಡಿತ್ತು.
ಆರಂಭದಿಂದಲೂ ಶ್ರೀ ಗಣೇಶನ ಕೃಪೆ ಹಾಗೂ ಭಕ್ತರ ಸಹಕಾರದಿಂದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಕೆಸರುಗದ್ದೆ ಓಟ, ರಂಗವಲ್ಲಿ ಸ್ಪರ್ಧೆ, ಭಜನಾ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಿತಿಯು ಸಾಮಾಜಿಕ ಸೇವೆಯಲ್ಲೂ ತನ್ನದೇ ಆದ ಕೊಡುಗೆ ನೀಡುತ್ತಿದೆ.
ಈ ಬಾರಿ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಮೂರು ದಿನಗಳ ಕಾಲ ಸಂಭ್ರಮದಿಂದ ಆಚರಿಸಲು ಸಮಿತಿ ನಿರ್ಧರಿಸಿದೆ. ರಕ್ತದಾನ ಶಿಬಿರ, ಕೆಸರುಗದ್ದೆ ಓಟ ಸೇರಿದಂತೆ ವಿವಿಧ ಸಾಂಸ್ಕೃತಿಕ, ಭಜನಾ, ರಂಗವಲ್ಲಿ ಹಾಗೂ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸರ್ವ ಭಕ್ತರು ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ನೀಡುವಂತೆ ಈ ಬಾರಿಯ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ವಕೀಲ ಶಿವಾನಂದ ಅಮೀನ್ ಅವರು ಸಮಿತಿಯ ಪರವಾಗಿ ಮನವಿ ಮಾಡಿದರು.
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸರ್ವ ಸದಸ್ಯರು, ಪಾಂಗಳದ ಉದ್ಯಮಿಗಳಾದ ಸುಧೀರ್ ಶೆಟ್ಟಿ, ಶೈಲೇಶ್ ಶೆಟ್ಟಿ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.


