ಈರುಳ್ಳಿ ಮೇಲಿನ ರಫ್ತು ಸುಂಕ ಶೇ.20ರಷ್ಟು ಕಡಿತ: ಏಪ್ರಿಲ್ 1ರಿಂದ ಜಾರಿ: ಕೇಂದ್ರ ಸರ್ಕಾರ

ದೆಹಲಿ:ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತಿದ್ದು, ರೈತರ ಅನುಕೂಲಕ್ಕಾಗಿ ಈರುಳ್ಳಿ ಮೇಲಿನ ರಫ್ತು ಸುಂಕವನ್ನು ಶೇಕಡಾ 20ರಷ್ಟು ಕಡಿತಗೊಳಿಸಿ ಕೇಂದ್ರ ಸರ್ಕಾರ ಘೋಷಿಸಿದೆ. ಇದು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯೊಂದಿಗೆ ಮಾತುಕತೆಯ ಬಳಿಕ ಕಂದಾಯ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ರೈತರ ಹಿತಕಾಯಲು ಈ ನಿರ್ಧಾರ ಕೈಗೊಂಡಿದ್ದಾಗಿ ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.
2024ರ ಸೆಪ್ಟೆಂಬರ್ನಿಂದ ಈರುಳ್ಳಿ ರಫ್ತಿನ ಮೇಲೆ ಸುಂಕ ವಿಧಿಸಲಾಗುತ್ತಿತ್ತು. 2024-25ನೇ ಸಾಲಿನ ಮಾರ್ಚ್ 18ರವರೆಗೆ 1.17 ಮಿಲಿಯನ್ ಟನ್‌ಗಳಷ್ಟು ಈರುಳ್ಳಿ ವಿವಿಧ ದೇಶಗಳಿಗೆ ರಫ್ತಾಗಿದೆ. ಈ ನಿರ್ಬಂಧಗಳ ಹೊರತಾಗಿಯೂ ಈರುಳ್ಳಿ ರಫ್ತು ಹೆಚ್ಚಾಗಿದೆ. ಸೆಪ್ಟೆಂಬರ್ನಲ್ಲಿ 72 ಸಾವಿರ ಟನ್ ಇದ್ದರೆ, ಜನವರಿಯಲ್ಲಿ 185 ಸಾವಿರ ಟನ್ ರಫ್ತಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ, ಮಧ್ಯ ಪ್ರದೇಶ, ಬಿಹಾರ, ಗುಜರಾತ್, ಆಂಧ್ರ ಪ್ರದೇಶ ಸೇರಿದಂತೆ ಹಲವು ಪ್ರಮುಖ ರಾಜ್ಯಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಇಳುವರಿ ಬಂದಿದೆ. ಇದರಿಂದಾಗಿ ಬೆಲೆ ಕುಸಿದಿದೆ. ಏಷ್ಯಾದ ಅತಿದೊಡ್ಡ ಸಗಟು ಮಾರುಕಟ್ಟೆಗಳಾದ ಮಹಾರಾಷ್ಟ್ರದ ಲಸಲ್‌ಗಾಂವ್ ಮತ್ತು ಪಿಂಪಾಲ್‌ಗಾಂವ್‌ನಲ್ಲಿ ಮಾರ್ಚ್ 21ರಂದು ಕ್ವಿಂಟಾಲ್‌ಗೆ 1,330 ರೂಪಾಯಿಗಳಷ್ಟಿತ್ತು. ಕಳೆದ ತಿಂಗಳಿನಿಂದ ದೇಶದಲ್ಲಿ ಶೇ.39ರಷ್ಟು ಬೆಲೆ ಕುಸಿದಿದೆ. ಚಿಲ್ಲರೆ ವ್ಯಾಪಾರದಲ್ಲಿ ಶೇ.10ರಷ್ಟು ಇಳಿದಿದೆ ಎಂದಿದೆ.