ಪಟ್ಟೆಯ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಹಾಗೂ ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ.), ಮಂಗಳೂರು ಇವರ ಸಹಯೋಗದಲ್ಲಿ ಉಚಿತ ಯಕ್ಷ ಶಿಕ್ಷಣ ತರಬೇತಿ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯಕ್ಷದ್ರುವ ಯಕ್ಷ ಶಿಕ್ಷಣ ಸಮಿತಿಯ ಪ್ರಧಾನ ಸಂಚಾಲಕ ವಾಸುದೇವ ಐತಾಳ, ತಾನು ಗಳಿಸಿದ ಖ್ಯಾತಿ ಮತ್ತು ಅನುಭವವನ್ನು ಮುಂದಿನ ತಲೆಮಾರಿನ ಕಲಾವಿದರಿಗೆ ಹಂಚುವುದು ಯಕ್ಷದ್ರುವ ಪಟ್ಲ ಫೌಂಡೇಶನ್‌ನ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಯಕ್ಷಗಾನವು ನಮ್ಮ ಮಣ್ಣಿನ ಸಂಸ್ಕೃತಿಯನ್ನು ಉಳಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಆತ್ಮಸ್ಥೈರ್ಯ ಹಾಗೂ ಮಾನಸಿಕ ನೆಮ್ಮದಿಯನ್ನು ಬೆಳೆಸುವ ಶಕ್ತಿಯುತ ಕಲೆಯಾಗಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗಣರಾಜ ಕುಂಬ್ಳೆ, ಯಕ್ಷಗಾನವು ಪುರಾಣಗಳ ಪರಿಚಯವನ್ನು ನೀಡುವ ಅಪೂರ್ವ ಕಲೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಈ ಕಲೆಯನ್ನು ಪರಿಚಯಿಸುವ ಮೂಲಕ ಅವರಲ್ಲಿ ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಮಾತನಾಡಿ, ಯಕ್ಷಗಾನವು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ. ಪಠ್ಯ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಶಿಕ್ಷಣವೂ ಅಗತ್ಯವಾಗಿದ್ದು, ಯಕ್ಷಗಾನ ಕಲಿಕೆಯ ಮೂಲಕ ಮಕ್ಕಳಲ್ಲಿ ಸಂಸ್ಕಾರ, ಶಿಸ್ತು ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಘ್ನೇಶ್ ಹಿರಣ್ಯ, ಯಕ್ಷದ್ರುವ ಯಕ್ಷ ಶಿಕ್ಷಣ ಸಮಿತಿ ಪುತ್ತೂರು–ಸುಳ್ಯ ಘಟಕದ ಸಂಚಾಲಕ ಪ್ರಶಾಂತ್ ರೈ ಮುಂಡಾಲಗುತ್ತು ಹಾಗೂ ನಾಟ್ಯಗುರು ಚಂದ್ರಶೇಖರ್ ಸುಳ್ಯಪದವು ಉಪಸ್ಥಿತರಿದ್ದರು.
ಪುಷ್ಪಾವತಿ ಸ್ವಾಗತಿಸಿದರು. ಲತಾ ವಂದಿಸಿದರು. ಸ್ವರ್ಣಶ್ರೀ ಕಾರ್ಯಕ್ರಮ ನಿರೂಪಿಸಿದರು.


