ನಳಿನ್ ಕುಮಾರ್ ಕಟೀಲ್ ವಿರುದ್ಧ ಹಿಂದೂ ಮಹಾಸಭಾ ಕಿಡಿ
ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿರುದ್ಧ ಹಿಂದೂ ಮಹಾಸಭಾ ಕಿಡಿಕಾರಿದೆ. ನಳಿನ್ ಕುಮಾರ್ ಕಟೀಲ್ ಅವರು ತಾಕತ್ತಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲಿ, ಅರುಣ್ ಕುಮಾರ್ ಪುತ್ತಿಲ ಅವರು ಪಡೆದ ಮತಗಳ 10 ಶೇಖಡಾ ಮತಗಳನ್ನು ಪಡೆದು ತೋರಿಸಲಿ ಎಂದು ಹಿಂದೂ ಮಹಾಸಭಾ ಚಾಲಕ್ ಧರ್ಮೇಂದ್ರ ಅಮೀನ್ ಸವಾಲೆಸೆದಿದ್ದಾರೆ. ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಳಿನ್ ಕುಮಾರ್ ಕಟೀಲು ಅವರಿಗೆ ವೈಯಕ್ತಿಕವಾಗಿ ಚುನಾವಣೆ ಎದುರಿಸುವ ತಾಕತ್ತಿಲ್ಲ. ತಾಕತ್ತಿದ್ದರೆ ಇವರು ಮೋದಿ ಮತ್ತು ಯೋಗಿ ಹೆಸರೆಲದೆ ಸ್ವತಂತ್ರವಾಗಿ ಸ್ಪರ್ಧಿಸಲಿ ಎಂದು ಹೇಳಿದರು. ಬಿಜೆಪಿ ಸೋಲಿನ ಹಿನ್ನೆಲೆಯಲ್ಲಿ ನಳಿನ್ ವಿರುದ್ಧ ಕಾರ್ಯಕರ್ತರು ಆಕ್ರೋಶಿತರಾಗುವುದು ಸಹಜ. ಕಾರ್ಯಕರ್ತರು ಅಂತಹ ತಪ್ಪೆನೂ ಮಾಡಿಲ್ಲ. ಈ ಹಿಂದೆ ಮೋದಿ ಮತ್ತು ಯೋಗಿಗೆ ಅವಮಾನವಾದಾಗ ನಳಿನ್ ಸುಮ್ಮನಿದ್ದರು. ಈಗ ಇವರ ಮೇಲೆ ಕಾರ್ಯಕರ್ತರು ಆಕ್ರೋಶಗೊಂಡಾಗ ಇವರ್ಯಾಕೆ ಸಿಟ್ಟಾಗುತ್ತಾರೆ. ಮೋದಿ ಮತ್ತು ಯೋಗಿಗಿಂತಲೂ ಇವರ ಮೇಲೆ ಇದ್ದಾರಾ? ಎಂದು ಧಮೇಂದ್ರ ಅಮೀನ್ ಪ್ರಶ್ನಿಸಿದರು.
ಸಮಸ್ತ ಹಿಂದೂ ಕಾರ್ಯಕರ್ತರ ಪ್ರಯತ್ನದ ಫಲವಾಗಿ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯರೇ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿರುವುದು ದುರಂತವಾಗಿದೆ. ನೈತಿಕತೆ ಇದ್ರೆ ಬಿಜೆಪಿ ಶಾಸಕರು ಮೌನವಾಗಿರಬೇಕು. ಸಾಧ್ಯವಾದರೆ ಹಿಂದೂ ಕಾರ್ಯಕರ್ತರಿಗೆ ಸಹಾಯ ಮಾಡಬೇಕು. ಅದು ಬಿಟ್ಟು ಹಿಂಬಾಗಿಲಿನಲ್ಲಿ ಅಧಿಕಾರ ಬಳಸಿ ದೌರ್ಜನ್ಯ ಎಸಿಗಿದರೆ ನಾವು ಸುಮ್ಮನಿರಲ್ಲ. ಎಲ್ಲಾ ಹಿಂದೂ ಸಂಘಟನೆಗಳನ್ನು ಸೇರಿಸಿಕೊಂಡು ಬಿಜೆಪಿ ವಿರುದ್ಧ ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ಧಮೇಂದ್ರ ಅಮೀನ್ ಎಚ್ಚರಿಸಿದರು.
ಬೆಳ್ತಂಗಡಿ ಹರೀಶ್ ಪೂಂಜಾ ಶಾಸಕ ಸತ್ಯಜಿತ್ ಮತ್ತು ತಿಮರೋಡಿ ಬಗ್ಗೆ ಮಾತಾಡುತ್ತಾರೆ. ಅವರು ಇಂದು, ನಿನ್ನೆಯವರಲ್ಲ. ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಅವರ ಕೊಡುಗೆ ಇದೆ. ಅವರ ಬಗ್ಗೆ ಮಾತಾಡಲು ಬಿಜೆಪಿ ಶಾಸಕರಿಗೆ ಯಾವುದೇ ನೈತಿಕತೆ ಇಲ್ಲ. ಹರೀಶ್ ಪೂಂಜಾ ಎಲ್ಲಿದ್ದವರು, ವಕೀಲಗಿರಿ ಮಾಡುತ್ತಿದ್ದರು. ಅಧಿಕಾರ ಸಿಕ್ಕಿದ ಕೂಡಲೇ ಬಾಯಿಗೆ ಬಂದ ರೀತಿಯಲ್ಲಿ ಮಾತಾಡುವುದು ತಪ್ಪು. ಹೇಗೆ ಪೀಠದಲ್ಲಿ ಕೂರಿಸಿದ್ದೇವೆಯೋ ಹಾಗೆಯೇ ಇಳಿಸಲು ಕೂಡ ನಮಗೆ ಗೊತ್ತಿದೆ ಎಂದು ಧರ್ಮೇಂದ್ರ ಅಮೀನ್ ಹೇಳಿದರು. ಹಿಂದೂ ಮಹಾಸಭಾವು ಬಿಜೆಪಿಯ ನಖಲಿ ಹಿಂದುತ್ವವಾದಿಗಳ ಮುಖವಾಡವನ್ನು ತೆರೆದಿಡುವ ಪ್ರಯತ್ನವನ್ನು ನಿರಂತರ ಮಾಡುತ್ತಿದೆ. ನಾವು ಮೋದಿಯವರನ್ನು ನೋಡಿಕೊಂಡು ಸುಮ್ಮನಿದ್ದೇವೆ.
ಅದು ಬಿಟ್ಟು ಇವರ ಮುಖ ನೋಡಿ ಸುಮ್ಮನಿರಲ್ಲ. ಎಲ್ಲದಕ್ಕೂ ಉತ್ತರ ಕೊಡಲು ನಮಗೆ ಗೊತ್ತಿದೆ. ಯಾವುದೇ ಶಾಸಕನ ಅಥವಾ ಮಂತ್ರಿಯ ಮಕ್ಕಳು ಭಜರಂಗದಲ್ಲಿಲ್ಲ., ಹೋರಾಟದ ಹಾದಿಯಲ್ಲಿಯೂ ಇಲ್ಲ. ಬಡಪಾಯಿಗಳ ಹೋರಾಟದ ಫಲವಾಗಿ ಇವರು ಅಧಿಕಾರ ನಡೆಸುತ್ತಿದ್ದಾರೆ. ಪುತ್ತೂರಿನ ಪ್ರಕರಣದಲ್ಲಿ ಸರಿಯಾದ ನ್ಯಾಯ ಸಿಕ್ಕಿಲ್ಲ. ಪ್ರಕರಣದ ಮೂಲ ಆರೋಪಿ ಡಿವೈಎಸ್ಪಿ ಅವರನ್ನು ತಕ್ಷಣ ಅಮಾನತು ಮಾಡಬೇಕು. ಇಲ್ಲದಿದ್ದಲ್ಲಿ ನಾವು ನ್ಯಾಯಾಲಯದ ಮೂಲಕ ಪ್ರಶ್ನೆ ಮಾಡುತ್ತೇವೆ ಎಂದು ಧರ್ಮೇಂದ್ರ ಅಮೀನ್ ಎಚ್ಚರಿಸಿದರು. ಸುದ್ದಿಗೋಷ್ಟಿಯಲ್ಲಿ ಹಿಂದೂ ಮಹಾಸಭಾ ಪುತ್ತೂರು ತಾಲೂಕು ಅಧ್ಯಕ್ಷ ಪುನೀತ್ ಸುವರ್ಣ ಮತ್ತು ಉಪಸ್ಥಿತರಿದ್ದರು.