ಕಾಪು: ಸ್ಥಳೀಯ ಶಾಸಕರ ಮುತುವರ್ಜಿಯಿಂದ ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಉಡುಪಿ, ರೈತ ಸಂಪರ್ಕ ಕೇಂದ್ರ ಕಾಪು ಹಾಗೂ ‘ಆತ್ಮ’ (ATMA) ಯೋಜನೆಯ ಜಂಟಿ ಆಶ್ರಯದಲ್ಲಿ ಕಾಪು ಕ್ಷೇತ್ರದ ರೈತರಿಗಾಗಿ ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರ ದಲ್ಲಿ ತೋಟಗಾರಿಕೆ ಮತ್ತು ಮೀನು ಕೃಷಿ ಕುರಿತು ತರಬೇತಿ ಹಾಗೂ ಅಧ್ಯಯನ ಪ್ರವಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕಾಪು ತಾಲೂಕು ಕೃಷಿ ತಾಂತ್ರಿಕ ವ್ಯವಸ್ಥಾಪಕಿ ಶ್ರೀಮತಿ ದಿವ್ಯಾ ಮಾತನಾಡಿ, “ಆತ್ಮ ಯೋಜನೆಯು ರೈತರಿಗೆ ಅಗತ್ಯ ಮಾಹಿತಿ, ಸಹಾಯ ಹಾಗೂ ಇಲಾಖೆಯ ಸೌಲಭ್ಯಗಳನ್ನು ತಲುಪಿಸುವ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬ ರೈತನ ಅಗತ್ಯತೆಗಳನ್ನು ಪೂರೈಸಲು ಅವರ ಮನೆಬಾಗಿಲಿಗೆ ಸೇವೆ ನೀಡಲು ಇಲಾಖೆ ಸಿದ್ಧವಿದೆ. ರೈತರು ತಮ್ಮ ಅಗತ್ಯಗಳಿಗಾಗಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿದರೆ ಆತ್ಮ ಯೋಜನೆಯಡಿ ಸೂಕ್ತ ನೆರವು ನೀಡಲಾಗುವುದು ಎಂದರು.

ಕೆವಿಕೆ (KVK) ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಭೂಮಿಕಾ ಅವರು ರೈತರೊಂದಿಗೆ ಸಂವಾದ ನಡೆಸಿ, ನುಗ್ಗೆ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳನ್ನು ಆರ್ಥಿಕವಾಗಿ ಲಾಭದಾಯಕವಾಗಿ ಬೆಳೆಯುವ ವಿಧಾನಗಳನ್ನು ವಿವರಿಸಿದರು. ಉತ್ತಮ ತಳಿಗಳ ಆಯ್ಕೆ, ಸಾವಯವ ಗೊಬ್ಬರ ಬಳಕೆ, ಬೆಳೆ ಪಾಲನೆ ಹಾಗೂ ಮಣ್ಣಿನ ಪೋಷಕಾಂಶಗಳ ನಿರ್ವಹಣೆ ಕುರಿತು ಸುದೀರ್ಘ ಮಾಹಿತಿ ನೀಡಿದ ಅವರು, ಆಧುನಿಕ ಯುಗದಲ್ಲಿ ಲಾಭದಾಯಕ ಹಾಗೂ ಆರೋಗ್ಯಕರ ಕೃಷಿಗಾಗಿ ಕೆವಿಕೆಯನ್ನು ಯಾವುದೇ ಸಮಯದಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.
ಮೀನು ಕೃಷಿ ಮಾಹಿತಿ: ವಿಷಯ ತಜ್ಞರಾದ ಡಾ ಎಸ್. ಎಚ್. ಹುಲ ಕೋಟಿ ಮಾತನಾಡಿ, ಅತ್ಯಂತ ಸುಲಭ ಮತ್ತು ಲಾಭದಾಯಕವಾದ ಮೀನು ಸಾಕಾಣಿಕೆಯನ್ನು ಚಿಕ್ಕ ನೀರಿನ ತೊಟ್ಟಿಯಿಂದ ಹಿಡಿದು ನೂರಾರು ಎಕರೆ ವಿಸ್ತೀರ್ಣದ ಜಲಮೂಲಗಳಲ್ಲಿ ಹೇಗೆ ಸಾಕಾಣಿಕೆ ಮಾಡಬಹುದು ಎಂದು ತಿಳಿಸಿಕೊಟ್ಟರು. ಈ ಭಾಗದ ವಾತಾವರಣ ಮತ್ತು ಪರಿಸರಕ್ಕೆ ಹೊಂದುವ ಉತ್ತಮ ಮೀನು ತಳಿಗಳು, ಸಾಕಾಣಿಕೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ವಹಿಸಬೇಕಾದ ಜಾಗರೂಕತೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಈ ತರಬೇತಿ ಹಾಗೂ ಅಧ್ಯಯನ ಪ್ರವಾಸದಲ್ಲಿ ಕ್ಷೇತ್ರದಲ್ಲಿನ 60ಕ್ಕೂ ಹೆಚ್ಚು ಸಕ್ರಿಯ ರೈತರು ಭಾಗವಹಿಸಿ ಸಲಹೆ-ಸೂಚನೆಗಳನ್ನು ಪಡೆದುಕೊಂಡರು. ಭಾಗವಹಿಸಿದ ಎಲ್ಲಾ ರೈತರಿಗೆ ಇಲಾಖೆಯ ವತಿಯಿಂದ ಉಚಿತವಾಗಿ ಉತ್ತಮ ತಳಿಯ ‘ಗಮ್ಲೆಶ್’ ಹಲಸಿನ ಗಿಡಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಕೃಷಿ ಸಖಿ ಶ್ರೀಮತಿ ಜಯಶ್ರೀ ಸಹಕರಿಸಿದರು.


