ಬೈಂದೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ
ಧರ್ಮಶ್ರೀ ರಿಲೀಫ್ ಫೌಂಡೇಶನ್ ಮಹಾರಾಷ್ಟ್ರ ಹಾಗೂ ಕರ್ನಾಟಕ ವತಿಯಿಂದ ಬೈಂದೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಧರ್ಮಶ್ರೀ ರಿಲೀಫ್ ಫೌಂಡೇಶನ್ ಕರ್ನಾಟಕ ಹಾಗೂ ಮಹಾರಾಷ್ಟ್ರ ಸಂಸ್ಥೆ ವತಿಯಿಂದ ಇಂದು ಬೈಂದೂರು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿದ ತಂಗುದಾಣವನ್ನು ಕೊಂಕಣ ರೈಲ್ವೆಯ ತರಬೇತಿ ಮತ್ತು ಅಭಿವೃದ್ಧಿ ವ್ಯವಸ್ಥಾಪಕ ಶ್ರೀಧರ ಅವಭ್ರತ್ ಹಾಗೂ ಸೀನಿಯರ್ ರೀಜನಲ್ ಟ್ರಾಫಿಕ್ ಮ್ಯಾನೇಜರ್ ದೀಪಕ್ ಭಟ್ ಇವರು ರಿಬ್ಬನ್ ಕಟ್ಟಿಂಗ್ ಹಾಗೂ ದೀಪ ಬೆಳಗಿಸುವ ಮುಖಾಂತರ ಲೋಕಾರ್ಪಣೆ ಗೊಳಿಸಿದರು.
ಬಳಿಕ ಮಾತನಾಡಿದ ಶ್ರೀಧರ್ ಅವಭ್ರತ್ ಹಲವಾರು ವರ್ಷಗಳಿಂದ ಬೈಂದೂರು ವಲಯದಲ್ಲಿ ಸಮಾಜ ಸೇವೆ ಮಾಡುತ್ತಿರುವ ಧರ್ಮಶ್ರೀ ಫೌಂಡೇಶನ್ ಸಂಸ್ಥೆಯು ನಮ್ಮ ರೈಲು ಇಲಾಖೆಗೆ ತಂಗುದಾಣವನ್ನು ಕೊಡುಗೆಯಾಗಿ ನೀಡಿದ್ದು ಬಹಳ ಸಂತೋಷದ ವಿಚಾರ ಈ ಸಂಸ್ಥೆಯು ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡಲಿ ಎಂದು ಶುಭ ಹಾರೈಸಿದರು
ಹಿರಿಯ ಅಧಿಕಾರಿ ದಿಲೀಪ್ ಡಿ ಭಟ್ ಮಾತನಾಡುತ್ತಾ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಯಾದ ನಾಗರಾಜ್ ಸುವರ್ಣ ಅವರು ಸ್ವಂತ ಉದ್ಯಮದಿಂದ ಬಂದ ಆದಾಯದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಇಂತಹ ಒಂದು ತಂಗುದಾಣವನ್ನು ಪ್ರಯಾಣಿಕರಿಗೆ ವಿಶ್ರಾಂತಿಗಾಗಿ ನೀಡಿದ್ದು ಬಹಳ ಹೆಮ್ಮೆಯ ವಿಚಾರ ಎಂದರು.
ಸಂಸ್ಥೆಯ ಸಂಸ್ಥಾಪಕ ನಾಗರಾಜ್ ಆರ್ ಸುವರ್ಣ ಮಾತನಾಡುತ್ತಾ ತನ್ನ ಹುಟ್ಟೂರಿಗೆ ಕಿಂಚಿತ್ತು ಏನಾದರೂ ನೀಡಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳಲ್ಲಿ ಈ ಪ್ರಯಾಣಿಕರ ತಂಗುದಾಣವು ಒಂದು ಇದರ ಸದುಪಯೋಗವನ್ನು ಎಲ್ಲಾ ರೈಲ್ವೆ ಪ್ರಯಾಣಿಕರು ಪಡೆದುಕೊಳ್ಳಲು ಎಂದರು.
ಕಾರ್ಯದರ್ಶಿ ಗಣೇಶ್ ಮಟ್ನಕಟ್ಟೆ ಮಾತನಾಡುತ್ತಾ ಇದನ್ನು ಬರಿಯ ಪ್ರಯಾಣಿಕರ ತಂಗುದಾಣ ಮಾತ್ರವಲ್ಲದೆ ಕರಾವಳಿಯ ಎಲ್ಲಾ ಆಚಾರ ವಿಚಾರಗಳನ್ನು ಬಿಂಬಿಸುವಂತೆ ನಿರ್ಮಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಟ್ರಸ್ಟಿಯಾದ ನಾಗರಾಜ್ ಆರ್ ಸುವರ್ಣ, ಹಾಗೂ ಟ್ರಸ್ಟಿಗಳಾದ ನಿರ್ಮಲ ಸುವರ್ಣ,ರಾಘವೇಂದ್ರ ಪೂಜಾರಿ, ರೂಪೇಶ್ ಪೂಜಾರಿ ,ಸುಶೀಲ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಗಣೇಶ್ ಮಟ್ನಕಟ್ಟೆ ವಿಶ್ವನಾಥ್ ಪೂಜಾರಿ ಸ್ವಾಗತಿಸಿ, ವಿಶ್ವನಾಥ್ ಪೂಜಾರಿ ವಂದಿಸಿದರು. ಮಹೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.