‘ಚಿಕ್ಕಮ್ಮ’ನ ಸರ ಪಡೆದು ನಾಪತ್ತೆಯಾಗಿದ್ದವ ಮೂಡುಬಿದಿರೆ ಪೊಲೀಸರ ವಶಕ್ಕೆ
ಮೂಡುಬಿದಿರೆ: ಕಳೆದ ಮೂರು ತಿಂಗಳ ಹಿಂದೆ ಅಶ್ವತ್ಥಪುರದಲ್ಲಿರುವ ತನ್ನ ಮಗಳ ಮನೆಗೆ ಹೋಗಲೆಂದು ನಾರಾವಿಯಿಂದ ಬಂದಿದ್ದ ಮಹಿಳೆಯೋರ್ವರೊಂದಿಗೆ ಪರಿಚಿತನಂತೆ ನಟಿಸಿ ಆಕೆಯ ಕೈಯಿಂದ ಚಿನ್ನದ ಸರ ಕೊಂಡೊಯ್ದು ವಾಪಾಸು ಬಾರದೆ ತಪ್ಪಿಸಿಕೊಂಡಿದ್ದ ಕಳ್ಳನನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವ ಪೊಲೀಸರ ತಂಡವು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಟ್ವಾಳ ತಾಲೂಕು ಕೆಂಪುಗುಡ್ಡೆಯ ಕಸವಿತ್ತಲ್ ಮನೆಯ ನಿವಾಸಿ ಸುರೇಶ ಯಾನೆ ಸಂತೋಷ ಬಂಧಿತ ಆರೋಪಿ.
ನಾರಾವಿಯಿಂದ ಬಸ್ಸಿನಲ್ಲಿ ಅಶ್ವತ್ಥಪುರದಲ್ಲಿರುವ ತನ್ನ ಮಗಳ ಮನೆಗೆ ಹೊರಟಿದ್ದ ಸುಂದರಿ ಪೂಜಾರ್ತಿ ಅವರು ಹಣ್ಣು ಖರೀದಿಸಲೆಂದು ಅಂಗಡಿಗೆ ಹೋದಾಗ ಅಪರಿಚಿತ ವ್ಯಕ್ತಿಯೊಬ್ಬ ‘ ಚಿಕ್ಕಮ್ಮ’ ಎಂದು ಕರೆದು ಪರಿಚಿತನಂತೆ ಮಾತನಾಡಿದ್ದ.ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ನೋಡಿ ನನಗೂ ಇದೇ ರೀತಿಯ ಚೈನ್ ಮಾಡಿಸಲಿಕ್ಕಿದೆ ಎಂದು ಹೇಳಿ ಸರವನ್ನು ಪಡೆದುಕೊಂಡು ಈಗ ಬರುವೆ ಎಂದು ನಂಬಿಸಿ ಚಿನ್ನದ ಸರವನ್ನು ಪಡೆದುಕೊಂಡು ಹೋಗಿದ್ದ.
ಹೆಂಗಸು ಕೂಡಾ ‘ ಚಿಕ್ಕಮ್ಮ’ ಅಂತ ಕರೆದನಲ್ಲಾ…ಇದ್ದಿರಬಹುದೆಂದು ಕೊಟ್ಟು ಬಿಟ್ಟಿದ್ದರು.ಹಾಗೆ ಹೋಗಿದ್ದ ಅಸಾಮಿ ಬರಲೇ ಇಲ್ಲ.ತಾನು ಮೋಸಹೋದೆನೆಂದು ಹೆಂಗಸಿಗೆ ಗೊತ್ತಾದಾಗ ಆತ ಹಲವು ಕಿಲೋಮೀಟರ್ ಹೋಗಿ ಆಗಿತ್ತು.
ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.
ಇದೀಗ ಇನ್ಸ್ಪೆಕ್ಟರ್ ಸಂದೇಶ್ ನೇತೃತ್ವದ ಪೊಲೀಸರ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ.
ಇದೇ ಸುರೇಶ 2023 ನವೆಂಬರ್ ತಿಂಗಳಲ್ಲಿ ಕಾರ್ಕಳ ತಾಲೂಕು ಮನ್ನಗೋಪುರ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರಿಗೂ ಇದೇ ರೀತಿ ವಂಚಿಸಿ ಒಂದೂವರೆ ಪವನ್ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದ.
ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯಾಗಿದ್ದ ಈತ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದು ನ್ಯಾಯಾಲಯವು ಈತನ ವಿರುದ್ಧ ದಸ್ತಗಿರಿ ವಾರೆಂಟ್ ಹೊರಡಿಸಿತ್ತು.
ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆರೋಪಿಯಿಂದ 36 ಗ್ರಾಂ.ತೂಕದ ಎರಡು ಚಿನ್ನದ ಸರಗಳ ಅಂದಾಜು ಎರಡೂವರೆ ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರ ನೇತ್ರತ್ವದ ತಂಡವು ಆರೋಪಿಯನ್ನು ಬಂಧಿಸಿದೆ.
ಎಸ್.ಐ.ಕೃಷ್ಣಪ್ಪ,ಅಪರಾಧ ವಿಭಾಗದ ಸಿಬ್ಬಂಧಿಗಳಾದ ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಹುಸೇನ್, ಅಖಿಲ್ ಅಹ್ಮದ್,ನಾಗರಾಜ್, ವೆಂಕಟೇಶ್ ರವರು ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.