ಪಡುಬಿದ್ರಿ: ಕಲಿಯುಗದಲ್ಲಿ ಶ್ರೀಹರಿಯನ್ನು ಸುಲಭವಾಗಿ ಒಲಿಸಿಕೊಳ್ಳುವ ಮಾರ್ಗವೆಂದರೆ ತುಳಸೀ ಸಂಕೀರ್ತನೆ. ಇದು ಪುಣ್ಯಪ್ರದವಾದ ಸೇವೆಯಾಗಿದ್ದು, ಪಡುಬಿದ್ರಿಯ ಯುವಕರು ಒಗ್ಗಟ್ಟಿನಿಂದ ಸಂಕೀರ್ತನಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕು. ನಾರಾಯಣನ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಪಡುಬಿದ್ರಿಯ ಶ್ರೀ ಖಡ್ಗೇಶ್ವರಿ ಜ್ಞಾನಮಂದಿರದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಆಯೋಜಿಸಲಾದ ತುಳಸೀ ಸಂಕೀರ್ತನಾ ಸೇವೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಉಡುಪಿಯಿಂದ ಆಗಮಿಸಿದ ಶ್ರೀಗಳು ಮೊದಲು ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬಳಿಕ ಶ್ರೀ ಖಡ್ಗೇಶ್ವರಿ ಜ್ಞಾನಮಂದಿರಕ್ಕೆ ಆಗಮಿಸಿದ ಅವರನ್ನು ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಹಾಗೂ ಗುರಿಕಾರ ಕೊರ್ನಾಯ ಪದ್ಮನಾಭ ರಾವ್ ಅವರು ಪಾದಪ್ರಕ್ಷಾಳನೆ ಮೂಲಕ ಸ್ವಾಗತಿಸಿ ದೇವತಾ ಗೃಹಕ್ಕೆ ಕರೆತಂದರು. ನಂತರ ಶ್ರೀಗಳು ಜ್ಯೋತಿಯೊಂದಿಗೆ ಸಂಕೀರ್ತನಾ ಮಂಟಪಕ್ಕೆ ಆಗಮಿಸಿ ಸಂಕೀರ್ತನಾ ಪರ್ವವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಕೀರ್ತನಾಗ್ರೇಸರ ಪಡುಬಿದ್ರಿ ಶ್ರೀನಿವಾಸ ಶರ್ಮ ಹಾಗೂ ಸಂಕೀರ್ತನಾ ಮಂಟಪದ ಕಲಾಕಾರ ಹರಿದಾಸ ರಾವ್ ಅವರನ್ನು ಶ್ರೀಗಳು ಗೌರವಿಸಿದರು. ಬಳಿಕ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಂಕೀರ್ತನೆಯಲ್ಲಿ ಭಾಗವಹಿಸಿ ಉಡುಪಿಗೆ ಹಿಂತಿರುಗಿದರು.
ಕಾರ್ಯಕ್ರಮದಲ್ಲಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಅರ್ಚಕರಾದ ರಘುಪತಿ ಆಚಾರ್ಯ, ಗುರುರಾಜ ಆಚಾರ್ಯ, ನಂದಕುಮಾರ್ ಆಚಾರ್ಯ, ಸನ್ನಿಧಾನದ ಪಾತ್ರಿಗಳಾದ ಹರಿನಾರಾಯಣ ರಾವ್, ಸುಬ್ರಹ್ಮಣ್ಯ ರಾವ್, ಗುರಿಕಾರರಾದ ಬಾಲಪ್ಪ ನಟರಾಜ ಪಿ.ಎಸ್., ಮುರುಡಿ ಜಗದೀಶ್ ರಾವ್, ಶ್ರೀ ವನದುರ್ಗಾ ಟ್ರಸ್ಟ್ ಕಾರ್ಯದರ್ಶಿ ವೈ.ಎನ್. ರಾಮಚಂದ್ರ ರಾವ್, ಕೋಶಾಧಿಕಾರಿ ವೈ. ಸುರೇಶ್ ರಾವ್, ಟ್ರಸ್ಟಿಗಳಾದ ಶ್ರೀನಿವಾಸ ರಾವ್, ರವೀಂದ್ರ ರಾವ್ ಶರ್ಮ, ಗುರುಪ್ರಸಾದ್ ರಾವ್, ಉದ್ಯಮಿ ಗಂಗಾಧರ ರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


