HomeFresh Newsಕಾಪು ತಾಲೂಕು 8ನೇ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಪು ತಾಲೂಕು 8ನೇ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಪು: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ 8ನೇ ಸಾಹಿತ್ಯ ಸಮ್ಮೇಳನವು ಅಕ್ಟೋಬರ್ 2 ಮತ್ತು 3ರಂದು ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಕಾಪು ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ ಮಲ್ಲಾರು ಗುರುವಾರ ಬಿಡುಗಡೆಗೊಳಿಸಿದರು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾಪು ತಾಲೂಕು ಕೇಂದ್ರದಲ್ಲಿ ಪ್ರಥಮ ಬಾರಿಗೆ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. ಸಮ್ಮೇಳನದ ಯಶಸ್ಸಿಗೆ ಪುರಸಭೆಯ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಸಾರ್ವಜನಿಕರು, ಸಾಹಿತ್ಯಾಸಕ್ತರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಕಸಾಪ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಸರ್ಕಾರವು ಎಂಟು ವರ್ಷಗಳ ಹಿಂದೆ ರಾಜ್ಯದಲ್ಲಿ ಹೊಸದಾಗಿ 49 ತಾಲೂಕುಗಳನ್ನು ರಚಿಸಿದ್ದು, ಈ ಹೊಸ ತಾಲೂಕುಗಳಲ್ಲಿ ನಿರಂತರವಾಗಿ ಎಂಟು ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ ಏಕೈಕ ತಾಲೂಕು ಎಂಬ ಹೆಗ್ಗಳಿಕೆಗೆ ಕಾಪು ತಾಲೂಕು ಘಟಕ ಪಾತ್ರವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಮಾತನಾಡಿ, ಇದುವರೆಗೆ ನಡೆದ ಏಳು ಸಾಹಿತ್ಯ ಸಮ್ಮೇಳನಗಳು ಆಯಾ ಸಮ್ಮೇಳನಗಳ ಸ್ವಾಗತ ಸಮಿತಿಗಳ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿವೆ. ಈ ಬಾರಿಯ ಸಮ್ಮೇಳನವೂ ಯಶಸ್ವಿಯಾಗಲು ಪುರಸಭೆ ಸೇರಿದಂತೆ ಸ್ಥಳೀಯ ಸಾಮಾಜಿಕ, ಧಾರ್ಮಿಕ ಹಾಗೂ ಸಮಾಜಸೇವಾ ಸಂಘ-ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪ ಜಿಲ್ಲಾ ಪ್ರತಿನಿಧಿಗಳಾದ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ನರಸಿಂಹಮೂರ್ತಿ ಮಣಿಪಾಲ, ಪುರಸಭಾ ಉಪಾಧ್ಯಕ್ಷೆ ಸರಿತಾ, ಪುರಸಭಾ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್, ಶೈಲೇಶ್ ಅಮೀನ್, ಶಶಿಕಲಾ, ವಾಣಿ ಆಳ್ವ, ದಿನೇಶ್ ಗೊಲ್ಲ, ಕಾಪು ಹೋಬಳಿ ಕಂದಾಯ ಪರಿವೀಕ್ಷಣಾಧಿಕಾರಿ ಶಬ್ಬೀರ್, ಸಾಹಿತ್ಯ ಪರಿಷತ್ ಕಸಾಪ ಸಹಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು, ಸದಸ್ಯರಾದ ಭಾಸ್ಕರ ಕಾಮತ್ ಕಟಪಾಡಿ, ಮಧುಕರ್ ಎಸ್. ಕಲ್ಯಾ, ಸೌಮ್ಯಾ ರಾಕೇಶ್, ಕಚೇರಿ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ಕಸಾಪ ಕಾಪು ಘಟಕದ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments