ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಆರಂಭಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ

ಕಡಬ ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಹಲವು ವರ್ಷಗಳ ಬೇಡಿಕೆಯಾಗಿರುವ ಸರಕಾರಿ ಪದವಿ ಕಾಲೇಜು ಆರಂಭಿಸದೇ ಹೋದರೆ ಸ್ಥಳೀಯ ವಿವಿಧ ಸಂಘ ಸಂಸ್ಥೆಗಗಳ ಸಹಕಾರದೊಂದಿಗೆ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕಡಬ ಪದವಿ ಕಾಲೇಜು ಹೋರಾಟ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ರೈ ಕರ್ಮಾಯಿ ಅವರು ಎಚ್ಚರಿಸಿದ್ದಾರೆ.

ಅವರು ಕಡಬದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕಡಬ ಪರಿಸರದ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಲಭಿಸಬೇಕೆಂಬ ಉದ್ದೇಶದಿಂದ ಕಡಬ ಕೇಂದ್ರಿತವಾಗಿ ಸರಕಾರಿ ಪದವಿ ಕಾಲೇಜು ಆರಂಭಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. ಕಡಬದ ಸುತ್ತಮುತ್ತಲೂ ಸುಮಾರು 18 ಗ್ರಾಮಗಳಿದ್ದು, ಸರಕಾರಿ ಮತ್ತು ಖಾಸಗಿ ಶಾಲೆಗಳು ಸೇರಿ 45 ಹಿರಿಯ ಪ್ರಾಥಮಿಕ ಶಾಲೆಗಳು, 15 ಪ್ರಾಥಮಿಕ ಶಾಲೆಗಳು, 4 ಪದವಿ ಪೂರ್ವ ಶಾಲೆಗಳು ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಭಾಗದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ಪದವಿ ಶಿಕ್ಷಣ ಪಡೆಯಲು ಯಾವುದೇ ಪದವಿ ಕಾಲೇಜುಗಳು ಇಲ್ಲದೇ ಇರುವುದು ಬಹಳ ದೊಡ್ಡ ಕೊರತೆಯೇ ಸರಿ. ಈ ಬಗ್ಗೆ ಈ ಹಿಂದಿನ ಸರಕಾರಕ್ಕೆ ನಾವು ಮನವಿ ಸಲ್ಲಿಸಿದಾಗ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ಅಧಿಕಾರಿಗಳು ಕಡಬಕ್ಕೆ ಭೇಟಿ ನೀಡಿ ಕಡಬದಲ್ಲಿ ಪ್ರಥಮ ದರ್ಜೆ ಕಾಲೇಜನ್ನು ಸ್ಥಾಪಿಸುವ ಬಗ್ಗೆ ಪರಿಶೀಲಿಸಿ ಸಭೆ ನಡೆಸಿ ಸರಕಾರಕ್ಕೆ ವರದಿ ನೀಡಿದ್ದರು. ಅದರಂತೆ ಕಡಬ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಸರ್ವೆ ನಂಬ್ರ 203/ಪಿ11 ರಲ್ಲಿ ಇರುವ 14.56 ಎಕ್ರೆ ಜಮೀನಿನಲ್ಲಿ 5 ಎಕ್ರೆ ಜಮೀನನ್ನು ಹೊಸದಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಮಾಡುವ ಉದ್ದೇಶಕ್ಕಾಗಿ ವಿಂಗಡಿಸಲಾಗಿದೆ. ಬಳಿಕ ಎರಡು ಬಾರಿ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್. ಅಂಗಾರ ಅವರು ಕಡಬದಲ್ಲಿ ಇಲಾಖಾಧಿಕಾರಿಗಳ ಸಭೆ ನಡೆಸಿ ಕಳೆದ ಬಜೆಟ್‍ನಲ್ಲಿ ಕಟ್ಟಡ ಹಾಗೂ ಕಾಲೇಜು ಮಂಜೂರುಗೊಳಿಸುವ ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕಡಬದಲ್ಲಿ ಪದವಿ ಕಾಲೇಜು ಆರಂಭಿಸುವ ಕುರಿತು ಸಚಿವರು ಯಾವುದೇ ರೀತಿಯ ಮುತುವರ್ಜಿ ವಹಿಸದೇ ಇರುವುದು ಕಡಬ ಪರಿಸರದ ಶಿಕ್ಷಣಾಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಡಬದಲ್ಲಿ ಸರಕಾರಿ ಪದವಿ ಕಾಲೇಜು ತೆರೆದು ತರಗತಿ ಪ್ರಾರಂಭಿಸಲು ಆಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ವಿಜಯಕುಮಾರ್ ರೈ ಇಲ್ಲದೇ ಹೋದರೆ ಪ್ರತಿಭಟನೆ ಅನಿವಾರ್ಯ ಎಂದರು.

ಸುದ್ದಿಗೋಷ್ಟಿಯಲ್ಲಿ ಕಡಬ ಪದವಿ ಕಾಲೇಜು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ.ಎಂ.ಕುರಿಯನ್, ಕಾರ್ಯದರ್ಶಿ ಕೆ.ಎಂ.ಹನೀಫ್, ಉಪಾಧ್ಯಕ್ಷರಾದ ಜನಾರ್ದನ ಗೌಡ ಪಣೆಮಜಲು ಹಾಗೂ ಚಂದ್ರಶೇಖರ ಗೌಡ ಕೋಡಿಬೈಲು ಅವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.