ಕಾಪು: ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕಾಪು ತಾಲೂಕು ಆಡಳಿತದ ವತಿಯಿಂದ ಸೆ.12ರಂದು ಮಜೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕಾಪು ತಾಲೂಕು ಪ್ರಜಾಸೇವಾ ಆಂದೋಲನ ಸಭೆ ನಡೆಯಿತು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಸಭೆಯಲ್ಲಿ ಒಟ್ಟು 76 ಅರ್ಜಿಗಳನ್ನು ಸ್ವೀಕರಿಸಲಾಯಿತು. ರಸ್ತೆ, ದಾರಿದೀಪ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.

ಅದೇ ರೀತಿ ಮೆಸ್ಕಾಂ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಅಕ್ರಮ-ಸಕ್ರಮ, ನಿವೇಶನ, ಹಕ್ಕುಪತ್ರ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿನ ಸಮಸ್ಯೆಗಳ ಬಗ್ಗೆಯೂ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು. ಅರ್ಜಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಕಾಪು ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಕಾಪು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬಿದ್ ಗಡ್ಯಾಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್, ಕಾಪು ತಹಶೀಲ್ದಾರ್ ಅನಂತ ಶಂಕರ್, ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿ ವಿಜಯ ಕುಮಾರ್, ಕಾಪು ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಹಾಗೂ ಮಜೂರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ವರುಣ್ ಉಪಸ್ಥಿತರಿದ್ದರು.


