ಪಾಂಗಾಳ: 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಪಾಂಗಾಳದಲ್ಲಿ ಸಾವಿರಾರು ಭಕ್ತರು ಮಣ್ಣಿನೊಂದಿಗೆ ಸಂಭ್ರಮಿಸುವ ವಿಶಿಷ್ಟ ಕಾರ್ಯಕ್ರಮ ನಡೆಯಿತು. ತುಳುನಾಡ ಮಾಣಿಕ್ಯ, ಖ್ಯಾತ ಕಲಾವಿದ ಅರವಿಂದ ಬೋಳಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
30 ವರ್ಷಗಳ ಹಿಂದೆ ಭಕ್ತರು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸಿಕೊಳ್ಳುವ ಆಶಯದೊಂದಿಗೆ ಆರಂಭಿಸಿದ ಪಾಂಗಾಳ ಶ್ರೀ ಗಣೇಶೋತ್ಸವ ಇಂದು ಸಾವಿರಾರು ಭಕ್ತರ ಹೃದಯದಲ್ಲಿ ನೆಲೆಸಿದೆ. ಭಕ್ತರು ಸ್ವಯಂಪ್ರೇರಿತರಾಗಿ ಆಗಮಿಸಿ ಸೇವೆ ಸಲ್ಲಿಸುತ್ತಾ ಗಣೇಶೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ಪಾಂಗಾಳ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಶಿವಾನಂದ ಅಮೀನ್ ಹೇಳಿದರು.
ಗದ್ದೆಯಲ್ಲಿ ನಡೆದ ‘ಕೆಸರುಡುಂಜಿ ದಿನ – ಮಣ್ಣಿನೊಂದಿಗೆ ಆಟ’ ಕಾರ್ಯಕ್ರಮವೇ ಭಕ್ತರ ಈ ಉತ್ಸಾಹ ಮತ್ತು ಸಂಭ್ರಮಕ್ಕೆ ಸಾಕ್ಷಿಯಾಗಿದೆ ಎಂದ ಅವರು, ಸೆಪ್ಟೆಂಬರ್ 14, 15 ಮತ್ತು 16ರಂದು ನಡೆಯಲಿರುವ ಶ್ರೀ ಗಣೇಶೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಮನವಿ ಮಾಡಿದರು.
ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರು ಶ್ರೀ ಜನಾರ್ದನ ತೀರ್ಥ ಮತ್ತು ಹಾಲನ್ನು ಗದ್ದೆಗೆ ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಬೋಳಾರ್, “ನಾನೂ ಮೊದಲು ಕೃಷಿಕನಾಗಿ ಮಣ್ಣಿನೊಂದಿಗೆ ಬದುಕಿದವನು. ಇಂದು ಕಲಾವಿದನಾಗಿದ್ದೇನೆ. ಪ್ರತಿಯೊಬ್ಬ ಮನುಷ್ಯನ ಬದುಕಿಗೂ ಆಧಾರವಾಗಿರುವ ಈ ಮಣ್ಣಿನ ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಮೂಲವಾದ ಮಣ್ಣನ್ನು ಎಂದಿಗೂ ಮರೆಯಬಾರದು,” ಎಂದು ಹೇಳಿದರು. ಎಲ್ಲರೂ ಶ್ರೀ ಗಣೇಶನ ಕೃಪೆಗೆ ಪಾತ್ರರಾಗಲಿ ಎಂದು ಅವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಪಾಂಗಾಳ ಶ್ರೀ ಗೋವಿಂದ ಶೆಟ್ಟಿ, ನ್ಯಾಯವಾದಿ ಶಾಂತರಾಮ್ ಶೆಟ್ಟಿ, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಮಹೇಂದ್ರ ಕುಮಾರ್ ಶರ್ಮ, ಖ್ಯಾತ ಯೂಟ್ಯೂಬರ್ ಪ್ರಜ್ವಲ್ ಶೆಟ್ಟಿ, ಸಿಎ ಬ್ಯಾಂಕ್ ಅಧ್ಯಕ್ಷ ಪಾಂಗಾಳ ರಾಜೇಶ್ ರಾವ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕಾಗಿ ಸಂಪಶೆಟ್ಟಿ ಮನೆತನದವರು ಗದ್ದೆಯ ವ್ಯವಸ್ಥೆ ಮಾಡಿದರು. ದೇವಸ್ಥಾನದ ಅರ್ಚಕರಾದ ಸುಬ್ರಮಣ್ಯ ಭಟ್ ಹಾಗೂ ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಿಯರ್ ಬಾಯ್ ಚೇತನ್, ಗೇಮ್ಸ್ ಆಯೋಜಕರಾದ ರಾಗಿ ತ್ರಿಷಾ ಕಾಲೇಜಿನ ಪಿ.ಟಿ. ಶಿಕ್ಷಕ ಶಶಿಕಿರಣ್, ಕೋಣದ ಆಟದಲ್ಲಿ ಕಲ್ಲಟ್ಟೆ ಪ್ರಶಾಂತ್ ಶೆಟ್ಟಿ ಹಾಗೂ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಯಲ್ಲಿ ಸಂದೇಶ್ ಸೇರಿಗಾರ್ ಸಹಕರಿಸಿದರು.


