ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: 2022-23ನೇ ಸಾಲಿನ ಗೌರವ ಪ್ರಶಸ್ತಿ ಘೋಷಣೆ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಕೊಡಮಾಡುವ 2022 ಮತ್ತು 2023ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಆರು ಮಂದಿ ಸಾಧಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ. 2022ನೇ ಸಾಲಿನಲ್ಲಿ ಹಂಝತುಲ್ಲಾಹ್ ಕುವೇಂಡ ಬೆಂಗಳೂರು (ಬ್ಯಾರಿ ಭಾಷೆ ಮತ್ತು ಸಂಘಟನೆ), ಮರಿಯಮ್ ಇಸ್ಮಾಈಲ್ ಉಳ್ಳಾಲ (ಬ್ಯಾರಿ ಸಾಹಿತ್ಯ) ಮತ್ತು ಎಂ.ಜಿ. ಶಾಹುಲ್ ಹಮೀದ್ ಗುರುಪುರ (ಬ್ಯಾರಿ ಸಂಸ್ಕೃತಿ ಮತ್ತು ಕಲೆ) ಹಾಗೂ 2023ನೇ ಸಾಲಿನಲ್ಲಿ ಟಿ.ಎ. ಆಲಿಯಬ್ಬ ಜೋಕಟ್ಟೆ (ಬ್ಯಾರಿ ಭಾಷೆ ಮತ್ತು ಸಂಘಟನೆ), ಅಶ್ರಫ್ ಅಪೋಲೊ ಕಲ್ಲಡ್ಕ (ಬ್ಯಾರಿ ಸಂಸ್ಕೃತಿ ಮತ್ತು ಕಲೆ) ಮತ್ತು ಮುಹಮ್ಮದ್ ಶರೀಫ್ ನಿರ್ಮುಂಜೆ (ಬ್ಯಾರಿ ಸಾಹಿತ್ಯ) ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಕಾಡೆಮಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಕರಂಬಾರು, ಮಾಜಿ ಸದಸ್ಯರಾದ ಅತ್ತೂರು ಚೆಯ್ಯಬ್ಬ, ಆಯಿಶಾ ಯು.ಕೆ. ಮತ್ತು ಹುಸೈನ್ ಕಾಟಿಪಳ್ಳ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದು ಸಹಕರಿಸಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸ್ಥಾಯಿ ಸಮಿತಿ ಸಭೆ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ.
ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆ. 6ರಂದು ಸಂಜೆ 4.30ಕ್ಕೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಉಮರ್ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.