ಖಾಲಿಯ ರಫೀಕ್ ಕೊಲೆ ಪ್ರಕರಣ: ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ
ಮಂಜೇಶ್ವರ : ಉಪ್ಪಳ ಹಿದಾಯತ್ ನಗರದಲ್ಲಿ 2017ರ ಫೆಬ್ರವರಿ 14ರಂದು ನಡೆದ ಶಾಲಿಯ ರಫೀಕ್ ಕೊಲೆ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ಮಂಗಳೂರು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆ ಗೊಳಿಸಿ ತೀರ್ಪಿತ್ತಿದೆ.
ಅಂದಿನ ದಿನ ಹಿದಾಯತ್ ನಗರದ ಕ್ಲಬ್‌ವೊಂದರಲ್ಲಿ 1ರಿಂದ 9ನೇ ಆರೋಪಿಗಳು ಒಟ್ಟಾಗಿ ಒಳಸಂಚು ರೂಪಿಸಿಕೊಂಡು, ಟಿಪ್ಪರ್ ಲಾರಿ ಬಳಸಿ ರಫೀಕ್ ಮತ್ತು ಅವನ ಸ್ನೇಹಿತರು ಸಂಚರಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಪೆಟ್ರೋಲ್ ಪಂಪ್ ಕಡೆಗೆ ಓಡಿದ ರಫೀಫ್‌ನನ್ನು ಪಿಸ್ತೂಲ್ ಮತ್ತು ತಲವಾರಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿತ್ತು.
ಈ ಪ್ರಕರಣದಲ್ಲಿ 1ರಿಂದ 9ನೇ ಆರೋಪಿಗಳ ವಿರುದ್ಧ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಬಳಿಕ ಈ ಪ್ರಕರಣದಲ್ಲಿ ಒಂದನೇ ಆರೋಪಿ ನೂರಲಿ, ಎರನೇ ಆರೋಪಿ ಜಿಯಾ, ಇಸುಬು ಶಿಯಾದ್, ರಶೀದ್, ಮುಜಿಬ್ ಹಾಗೂ ಕಲ್ಲಟ್ರ ನಜೀಬ್ ಕೆ.ಎ. ಎಂಬಿವರನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲಾಗಿತ್ತು.
ಸರ್ಕಾರದ ಪರವಾಗಿ 31 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದ್ದು, 68 ದಾಖಲೆಗಳು ಮತ್ತು 38 ಮುದ್ದೆ ಮಾಲುಗಳನ್ನು ಗುರುತಿಸಲಾಗಿತ್ತು.
ವಿಚಾರಣೆಯಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಆಧಾರದಿಂದ ಆರೋಪಿಗಳನ್ನು ತಪ್ಪಿತಸ್ಥರಾಗಿ ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ, ಗೌರವಾನ್ವಿತ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿಯವರು ಎಲ್ಲ ಆರೋಪಿಗಳನ್ನು ಖುಲಾಸೆ ಗೊಳಿಸಿ ತೀರ್ಪು ನೀಡಿದ್ದಾರೆ.
ಆರೋಪಿಗಳ ಪರವಾಗಿ ಹಿರಿಯ ನ್ಯಾಯವಾದಿಗಳಾದ ವೈ. ವಿಕ್ರಮ್ ಹೆಗ್ಡೆ, ರಾಜೇಶ್ ಕೆ.ಜಿ. ಮತ್ತು ಅಬ್ದುಲ್ ಅಜೀಜ್ ಬಾಯರ್ ವಾದ ಮಂಡಿಸಿದ್ದರು.