ಯಕ್ಷರಂಗದ ಅಪ್ರತಿಮ ಕಲಾವಿದ ಕುಂಬ್ಳೆ ಸುಂದರ್ ರಾವ್ ಅಸ್ತಂಗತ

ಯಕ್ಷರಂಗದ ಅಪ್ರತಿಮ ಕಲಾವಿದ ಕುಂಬ್ಳೆ ಸುಂದರ್ ರಾವ್ ಅಸ್ತಂಗತರಾಗಿದ್ದಾರೆ.ಯಕ್ಷಗಾನ ಕಲಾವಿದರೂ ಮಾಜಿ ಶಾಸಕರೂ ಆಗಿದ್ದ ಕುಂಬ್ಳೆ ಸುಂದರ್ ರಾವ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಯಕ್ಷಗಾನ ಮತ್ತು ತಾಳ-ಮದ್ದಳೆ (ಸಾಂಪ್ರದಾಯಿಕ ನೃತ್ಯ) ಕಲಾವಿದರೂ ಆಗಿದ್ದ ಸುಂದರ್ ರಾವ್, ಮಂಗಳೂರಿನ ಆಗಿನ ಸುರತ್ಕಲ್ ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದರು. 1994 ರಿಂದ 1999ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಮಾಡಿದ್ದರು.
ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಯಕ್ಷಗಾನ ಕಲಾವಿದರೊಬ್ಬರು ನೇರವಾಗಿ ಮತದಾರರಿಂದಲೇ ಆರಿಸಲ್ಪಟ್ಟ ಪ್ರಪ್ರಥಮ ಶಾಸಕರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ ಮಾರ್ಚ್ 20ರಲ್ಲಿ ಕೇರಳ ರಾಜ್ಯದ ಕುಂಬಳೆಯಲ್ಲಿ ಜನಿಸಿದ ಅವರು ಪ್ರಸ್ತುತ ಮಂಗಳೂರಿನ ಪಂಪ್ ವೆಲ್ ಬಳಿ ವಾಸವಾಗಿದ್ದರು.

ಯಾವುದೇ ಬಗೆಯ ಪಾತ್ರಗಳನ್ನು ಲೀಲಾಜಾಲವಾಗಿ ಮಾಡುತ್ತಿದ್ದ ಅವರಿಗೆ ಪಾದುಕಾ ಪಟ್ಟಾಭಿಷೇಕದ ಭರತ, ವಿರಾಟ ಪರ್ವದ ಉತ್ತರ ಕುಮಾರ, ಕೃಷ್ಣ ಸಂಧಾನದ ಕೃಷ್ಣ, ದಕ್ಷಯಜ್ಞದ ಈಶ್ವರ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಗೋವಿಂದ ದೀಕ್ಷಿತ, ತ್ರಿಪುರ ಮಥನದ ಚಾರ್ವಾಕ ಮುಂತಾದ ಪಾತ್ರಗಳು ಬಹಳಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು. ಭಕ್ತಿ, ಕರುಣಾರಸದ ಪಾತ್ರಗಳನ್ನು ಹೆಚ್ಚು ಸೊಗಸಾಗಿ ಚಿತ್ರಿಸುತ್ತಿದ್ದರು.
ಇವರ ಕಲಾ ಸೇವೆಯನ್ನು ಗುರುತಿಸಿ ಅನೇಕ ಗೌರವಗಳು , ಪ್ರಶಸ್ತಿಗಳು ಸಂದಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018–2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಪಡೆದಿದ್ದಾರೆ.
ಕಾಸರಗೋಡಿನ ಕುಂಬಳೆಯಲ್ಲಿ ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಪುತ್ರರಾಗಿ 1934ನೇ ಮಾರ್ಚ್ 20ರಲ್ಲಿ ಜನಿಸಿದ ಅವರು ಚಿಕ್ಕಂದಿನಲ್ಲಿಯೇ ಯಕ್ಷಗಾನದ ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದರು.
ನಂತರ ಕೂಡ್ಲು, ಕುಂಡಾವು, ಸುರತ್ಕಲ್, ಧರ್ಮಸ್ಥಳ, ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಮಿಂಚಿದರು. ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ಶಂಕರನಾರಾಯಣ ಸಾಮಗ, ಮಲ್ಪೆ ರಾಮದಾಸ ಸಾಮಗ, ತೆಕ್ಕಟ್ಟೆ ಆನಂದ ಮಾಸ್ಟರ್ ಮುಂತಾದವರ ಜತೆ ತಾಳಮದ್ದಳೆಗಳಲ್ಲೂ ಮೆರೆದರು.

ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಂಘಟನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಅವರು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ ಒಂದು ಅವಧಿಗೆ ಕಾರ್ಯ ನಿರ್ವಹಿಸಿದರು.
ಆದ್ರೆ ಇಂದು ಬೆಳಗ್ಗಿನ ಜಾವಾ ಮೂರು ಗಂಟೆ ಹೊತ್ತಿಗೆ ಅವರು ಮಂಗಳೂರಿನ ಪಂಪ್ವೆಲ್ ನ ಸ್ವಗೃಹದಲ್ಲಿ ಇಹ ಲೋಕ ತ್ಯಜಿಸಿದ್ದಾರೆ.
ಸುಂದರ ರಾವ್ ನಿಧನಕ್ಕೆ ಯಕ್ಷಗಾನ ವಲಯ ತೀವ್ರ ಶೋಕ ವ್ಯಕ್ತಪಡಿಸಿದೆ.
ಕುಂಭ್ಳೆ ಅವರ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೆಂದ್ರ ಹೆಗ್ಗಡೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ್ ಕಾಮತ್ , ಡಾ. ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಜಿಲ್ಲಾ ಉಸ್ತುವರಿ ಸಚಿವ ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ, ಪ್ರದೀಪ್ ಕುಮಾರ್ ಕಲ್ಲೂರಾ, ಸಹಿತ ಅನೇಕ ಯಕ್ಷಗಾನ ದಿಗ್ಗಜರು, ಸಮಾಜದ ಧುರೀಣರು ಸಂತಾಪ ಸೂಚಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ನಾಳೆ ನೆರವೇರಲಿದೆ. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಮಂಗಳೂರು ಪಂಪ್‌ವೆಲ್ ಬಳಿ ಇರುವ ಅವರ ಮನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
