ಕುಂದಾಪುರ: ಭೀಕರ ಗಾಳಿ-ಮಳೆ: ಮರ ಬಿದ್ದು 2 ಗಂಟೆ ಕೊಲ್ಲೂರು ಮುಖ್ಯ ರಸ್ತೆ ಬಂದ್!
ಕುಂದಾಪುರ: ಬುಧವಾರ ರಾತ್ರಿ ಸುರಿದ ಭಾರೀ ಗಾಳಿ-ಮಳೆಯಿಂದಾಗಿ ಹೆಮ್ಮಾಡಿ ಸಮೀಪದ ಕೊಲ್ಲೂರು ಮುಖ್ಯ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಕೆಲಹೊತ್ತು ವಾಹನ ಸಂಚಾರಕ್ಕೆ ತೊಡಕುಂಟಾಯಿತು.
ಹೆಮ್ಮಾಡಿ ಸಮೀಪದ ಕಟ್ ಬೇಲ್ತೂರಿ ಗ್ರಾಮಪಂಚಾಯತ್ ವ್ಯಾಪ್ತಿಯ ಸುಳ್ಸೆ ತಿರುವಿನಲ್ಲಿ ಎರಡು ಬೃಹತ್ ಗಾತ್ರದ ಮರ ಹೆಮ್ಮಾಡಿ-ಕೊಲ್ಲೂರು ಮುಖ್ಯ ರಸ್ತೆಗೆ ಅಡ್ಡಲಾಗಿ ಉರಳಿ ಬಿದ್ದು ಕೆಲ ಹೊತ್ತು ಸಂಚಾರ ವ್ಯತ್ಯಯ ಉಂಟಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯ ಯುವಕರು ಉರುಳಿ ಬಿದ್ದ ಮರಗಳನ್ನು ಯಂತ್ರದ ಮೂಲಕ ಕಾಟಾವು ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕೇವಲ 200 ಮೀಟರ್ ಅಂತರದಲ್ಲೇ ಎರಡು ಬೃಹತ್ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಹಾಗೂ ಮಳೆಯೂ ಬಿಡದೇ ಸುರಿದಿದ್ದರಿಂದ ಕಾರ್ಯಾಚರಣೆಗೆ ತೊಡಕಾಗಿ ಸರಿಸುಮಾರು ಎರಡು ಗಂಟೆಗಳ ಕಾಲ ಹೆಮ್ಮಾಡಿ-ಕೊಲ್ಲೂರು ಮುಖ್ಯ ರಸ್ತೆ ಬಂದ್ ಆಗಿತ್ತು. ಈ ವೇಳೆ ರಸ್ತೆಯೂದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂದಿತು.
ರಾತ್ರಿಯೇ ಸ್ಥಳಕ್ಕೆ ಸ್ಥಳೀಯ ಗ್ರಾ.ಪಂ ಸದಸ್ಯ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಗ್ರಾಮಕರಣಿಕರ ಕಚೇರಿ ಸಿಬ್ಬಂದಿ ದಿನೇಶ್ ಗಾಣಿಗ, ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.