ಮಂಗಳೂರು: ಕಣಚೂರು ಮೋನು, ಎಂ.ಬಿ. ಪುರಾಣಿಕ್ ಅವರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

ಮಂಗಳೂರು ವಿಶ್ವವಿದ್ಯಾನಿಲಯದ 41ನೇ ವಾರ್ಷಿಕ ಘಟಿಕೋತ್ಸವದ ಪ್ರಯುಕ್ತ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜು ಅಧ್ಯಕ್ಷ ಕಣಚೂರು ಮೋನು, ಮಂಗಳೂರಿನ ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಮತ್ತು ಕುಂದಾಪುರದ ಉದ್ಯಮಿ ರಾಮಕೃಷ್ಣ ಆಚಾರ್ ಅವರನ್ನು ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದೆ.

ಮೂಲತಃ ಮರದ ವ್ಯಾಪಾರಿಯಾಗಿದ್ದ ಕಣಚೂರು ಮೋನು, ಮೊದಲಿಗೆ ನಾಟೆಕಲ್ ನಲ್ಲಿ ಕಣಚೂರು ವುಡ್ ಇಂಡಸ್ಟ್ರೀಸ್ ಹೊಂದಿದ್ದರು. ಆನಂತರ 2002ರಲ್ಲಿ ಕಣಚೂರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದರು. ಶಿಕ್ಷಣ ಸಂಸ್ಥೆಯೀಗ ಮೆಡಿಕಲ್ ಕಾಲೇಜು, ಆಸ್ಪತ್ರೆಯಾಗಿ ಬದಲಾಗಿದ್ದು ತಂದೆ- ಮಗ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕಣಚೂರು ಮೋನು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿದ್ದಾರೆ. ಇವರನ್ನು 2023ರ ಸಾಲಿನ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದೆ.

ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾದ ಎಂಬಿ ಪುರಾಣಿಕ್ ಸಮಾಜದ ವಿವಿಧ ಸ್ತರಗಳಲ್ಲಿ ದುಡಿದು ಸಾಧನೆ ಮಾಡಿದ್ದಾರೆ. ಮಂಗಳೂರು, ತಲಪಾಡಿಯಲ್ಲಿ ಶಾರದಾ ವಿದ್ಯಾಸಂಸ್ಥೆಗಳು ಸೇರಿದಂತೆ ವಿವಿಧ ಕಡೆ ಹಲವು ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ವಿಶ್ವ ಹಿಂದು ಪರಿಷತ್ತಿನಲ್ಲಿ ತೊಡಗಿಕೊಂಡಿರುವ ಪುರಾಣಿಕ್ ಅವರನ್ನು ಈ ಬಾರಿ ಮಂಗಳೂರು ವಿವಿಯು ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯವರಾದ ರಾಮಕೃಷ್ಣ ಆಚಾರ್ ಬಡ ಕುಟುಂಬದಲ್ಲಿ ಜನಿಸಿ ಸಾಧನೆ ಮಾಡಿದವರು. ಕೇವಲ 25 ಸಾವಿರ ಬಂಡವಾಳದಲ್ಲಿ ಫ್ಯಾಬ್ರಿಕೇಶನ್ ವೃತ್ತಿ ಆರಂಭಿಸಿದ ಅವರು ಈಗ ಕೃಷಿ, ನೀರು ನಿರ್ವಹಣೆ ಮತ್ತು ಒಳಚರಂಡಿ ಸಂಸ್ಕರಣೆ ಕ್ಷೇತ್ರದಲ್ಲಿ ವರ್ಷಕ್ಕೆ 250 ಕೋಟಿ ವಹಿವಾಟು ನಡೆಸುತ್ತಾರೆ. ಇವರ ಎಲಿಕ್ಸಿರ್ ಬ್ರಾಂಡ್ ವಾಟರ್ ಪ್ಯೂರಿಫೈಯರ್ ದೇಶಾದ್ಯಂತ ನೀರು ವಿತರಿಸಲು ಪ್ರಮಾಣಿತ ಸಾಧನವಾಗಿ ಹೆಸರು ಮಾಡಿದೆ. ಕಾರ್ಕಳ ತಾಲೂಕಿನ ಮುನಿಯಾಲಿನಲ್ಲಿ 35 ಎಕರೆ ಪ್ರದೇಶದಲ್ಲಿ ಗೋಧಾಮ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published.