ಮಂಗಳೂರು: ಕೆಎಂಸಿ ಆಸ್ಪತ್ರೆಯಲ್ಲಿ ಸ್ತನ ಸ್ವಾಸ್ಥ್ಯ ಕೇಂದ್ರ ಆರಂಭ
ಮಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆ ವತಿಯಿಂದ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ತನ ಸ್ವಾಸ್ಥ್ಯ ಕೇಂದ್ರ ಆರಂಭಿಸಲಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಆಂಕೋಲಾಜಿಸ್ಟ್ ಡಾ. ಹರೀಶ್ ಅವರು ಹೇಳಿದರು.
ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಕ್ಯಾನ್ಸರ್ ಆರೈಕೆಗಾಗಿ ಅತ್ಯುತ್ತಮ ದರ್ಜೆಯ ಚಿಕಿತ್ಸೆಯನ್ನು ಕೆಎಂಸಿ ಆಸ್ಪತ್ರೆ ನೀಡುತ್ತಿದೆ. ಕೇಂದ್ರದಲ್ಲಿ ನುರಿತ ವೈದ್ಯರು, ಅಂಕೋಲಾಜಿಸ್ಟ್‌ಗಳು, ಶಸ್ತ್ರಚಿಕಿತ್ಸಕರು ಮತ್ತು ರೇಡಿಯೋಲಾಜಿಸ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದಲ್ಲಿ ಯುವತಿಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ. ಜಾಗೃತಿ ಮಾಸದಲ್ಲಿ ರೋಗದ ತಪಾಸಣೆ ಮತ್ತು ತಡೆಗಟ್ಟುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಅಂಕೋಲಾಜಿಸ್ಟ್ ಡಾ. ಸಾನ್ಯೋ ಡಿ ಸೋಜಾ, ಸರ್ಜಿಕಲ್ ಆಂಕೋಲಾಜಿಸ್ಟ್ ಡಾ. ಕೀರ್ತಿಕ್ ಕೆ.ಎಸ್., ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕೆಎಂಸಿ ಆಸ್ಪತ್ರೆಯ ಸ್ತನ ಶಸ್ತ್ರಚಿಕಿತ್ಸಕ ಡಾ. ಬಸಿಲಾ ಆಲಿ, ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಘೀರ್ ಸಿದ್ದಿಕಿ, ವೈದ್ಯಕೀಯ ಅಂಕೋಲಾಜಿಸ್ಟ್ ಡಾ. ಸನಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.