ಮೂಡುಬಿದಿರೆ : ಶ್ರೀ ಮಹಾವೀರ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ
ಮೂಡುಬಿದಿರೆ : ಪೊಲೀಸ್ ಪ್ರಕರಣ, ಮಾದಕ ವ್ಯಸನಗಳ ಸೇವನೆಗೆ ಬಲಿಯಾಗಿ ಬಂಗಾರದಂತಹ ಜೀವನವನ್ನು ಕಳೆದುಕೊಳ್ಳದೆ ಪಠ್ಯ ಪಠ್ಯೇತ್ತರ ಚಟುವಟಿಕೆಯೊಂದಿಗೆ ವಿದ್ಯಾರ್ಥಿಗಳು ಜೀವನದ ಪಾಠವನ್ನು ಕಲಿತು ಉತ್ತಮ ಗುರಿಯನ್ನು ತಲುಪಬೇಕು ಎಂದು ಪಣಂಬೂರು ಎಸಿಪಿ ಶ್ರೀಕಾಂತ್ ಅಭಿಪ್ರಾಯಪಟ್ಟರು.
ಅವರು ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಮೊಬೈಲ್, ವಾಹನಗಳ ಬಳಕೆ ಸಂದರ್ಭ ಅತಿಯಾದ ಉತ್ಸಾಹವನ್ನು ತೋರುವುದರಿಂದ ಜೀವನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದ ಅವರು ಸ್ವಂತಿಕೆ ಬಳಸಿ ತಮ್ಮ ಜೀವನಕ್ಕೆ ಉತ್ತಮವಾದ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕೆಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದಾಗ ಉತ್ತಮ ಉದ್ಯೋಗ ಪಡೆಯಲು ಸಾಧ್ಯ. ಕಾನೂನಿಗೆ ಬೆಲೆ ನೀಡಿ ಶಿಸ್ತು, ನಿಯತ್ತಿನ ಜೀವನ ಪಾಲಿಸುವ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳುತ್ತಾರೆ ಎಂದು ಹಲವು ವಿದ್ಯಾರ್ಥಿಗಳ ಸಾಧನೆಯ ಉಲ್ಲೇಖದೊಂದಿಗೆ ಮಾಹಿತಿಯಿತ್ತರು.
ಮಹಾವೀರ ಕಾಲೇಜಿನ ವಿಶ್ವಸ್ಥ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಭಾಗವಹಿಸಿ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶಪಾಲ ಡಾ. ರಾಧಾಕೃಷ್ಣ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ವಿದ್ಯೆಯ ಅಧ್ಯಯನದೊಂದಿಗೆ ಭವಿಷ್ಯದ ಬೆಳವಣಿಗೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆಯಿತ್ತರು.
ಸೇವಾ ನಿವೃತ್ತಿ ಹೊಂದಿದ ಮಹಾಬಲರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.
ಮಹಾವೀರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಹಿತವಚನ ನೀಡಿದರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ. ಹರೀಶ್ ಪ್ರಮಾಣವಚನ ಬೋಧಿಸಿದರು.
ಆಡಳಿತ ಮಂಡಳಿ ಕೋಶಾಧಿಕಾರಿ ರಾಮ್‌ಪ್ರಸಾದ್, ಸದಸ್ಯರಾದ ಕೆ.ಆರ್. ಪಂಡಿತ್, ರಮಾನಾಥ ಭಟ್, ಪ್ರೇಮಚಂದ್ರ ಶೆಟ್ಟಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶುತಿ ಎಸ್. ಪೇರಿ, ಉಪಾಧ್ಯಕ್ಷರಾದ ಗಾಯತ್ರಿ, ಕೌಶಿಕ್ ಟಿ. ಪೂಜಾರಿ, ಕಾರ್ಯದರ್ಶಿ ರೋಹಿಸ್ಟನ್ ಪಿಂಟೋ, ಜತೆ ಕಾರ್ಯದರ್ಶಿಗಳಾದ ಶೃತಿ, ಪೂಜಾ ಆಚಾರ್ಯ ವೇದಿಕೆಯಲ್ಲಿದ್ದರು.
ರೋಹಿಷ್ಟನ್ ಪಿಂಟೋ ಸ್ವಾಗತಿಸಿದರು. ಉಪನ್ಯಾಸಕ ಡಾ. ಪ್ರವೀಣ್ ಕೆ. ಸನ್ಮಾನಿತರನ್ನು ಪರಿಚಯಿಸಿದರು.ಸ್ಯಾಮ್ಯೂವೆಲ್ ಜೇಸ್ಟನ್ ಸೆರಾವೋ ಕಾರ್ಯಕ್ರಮ ನಿರೂಪಿಸಿದರು. ಶೃತಿ ಧನ್ಯವಾದವಿತ್ತರು.