ಮೂಡುಬಿದ್ರೆ: ಜಾಂಬೂರಿ ವೀಕ್ಷಿಸಿ ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಮೆಚ್ಚುಗೆ

ಮೂಡುಬಿದಿರೆ: ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸ್ಕೌಟ್‌ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯ ೪ನೇ ದಿನ ತಮಿಳುನಾಡಿನ ಶಿಕ್ಷಣ ಸಚಿವ, ರಾಜ್ಯ ಸ್ಕೌಟ್ ಗೈಡ್ಸ್ ಅಧ್ಯಕ್ಷ ಅನ್ಬಿಲ್ ಮಹೇಶ್ ಪೊಯ್ಯಮೊಜಿ ಭೇಟಿ ನೀಡಿ ವ್ಯವಸ್ಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಬಳಿಕ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ತಮಿಳುನಾಡು ದಿನ ಕಾರ್ಯಕ್ರಮದಲ್ಲಿ ತಮಿಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಬಳಿಕ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ಶಿಕ್ಷಣದ ಜೊತೆಗೆ ಸ್ಕೌಟ್‌ಗೈಡ್ಸ್ಗೂ ಹೆಚ್ಚಿನ ನೆರವು ನೀಡುತ್ತಿದೆ. ಪ್ರಾದೇಶಿಕ, ರಾಜ್ಯ, ರಾಷ್ಟ್ರಮಟ್ಟದ ಜಾಂಬೂರಿಗಳನ್ನೂ ಕೂಡ ಆಯೋಜಿಸುತ್ತಿದ್ದೇವೆ. ಜಾಂಬೂರಿಯಿಂದ ಪ್ರಾದೇಶಿಕ ಸಂಸ್ಕೃತಿ, ಪರಂಪರೆಯ ವಿನಿಮಯವಾಗುತ್ತದೆ. ವಿದ್ಯಾರ್ಥಿಗಳು ಜಾಂಬೂರಿಯಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರದರ್ಶಿಸುವುದು ಮಾತ್ರವಲ್ಲದೇ ಇತರ ಜಿಲ್ಲೆ, ರಾಜ್ಯ, ರಾಷ್ಟ್ರಗಳ ಸಂಸ್ಕೃತಿಯನ್ನು ಅರಿಯಬೇಕು. ತಮಿಳುನಾಡಿನಲ್ಲಿ ಈಗ ಮೂರುವರೆ ಲಕ್ಷ ಸ್ಕೌಟ್‌ಗೈಡ್ಸ್ನ ವಿದ್ಯಾರ್ಥಿಗಳಿದ್ದಾರೆ. ಅದನ್ನು ಹತ್ತು ಲಕ್ಷದವೆರೆಗೆ ಹೆಚ್ಚಿಸುವ ಗುರಿ ನಮ್ಮದು. ಸ್ಕೌಟ್‌ಗೈಡ್ಸ್ ಚಟುವಟಿಕೆಗೆ ಹೆಚ್ಚಿನ ಅನುದಾನ ಒದಗಿಸುವಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.

ಸ್ಕೌಟ್ ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿ.ಆರ್.ಸಿಂದಿಯಾ ಅವರು ಅನ್ಬಿಲ್ ಮಹೇಶ್ ಪೊಯ್ಯಮೊಜಿ ಅವರನ್ನು ಸನ್ಮಾನಿಸಿದರು.
ಸ್ಕೌಟ್ ಗೈಡ್ಸ್ನ ತಮಿಳುನಾಡು ರಾಜ್ಯ ಮುಖ್ಯ ಆಯುಕ್ತ ನಂದ ಕುಮಾರ್ ಸಹಿತ ಸ್ಕೌಟ್‌ಗೈಡ್ಸ್ನ ತಮಿಳುನಾಡು, ಕರ್ನಾಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.