ಮೂಡುಬಿದಿರೆ : ಮಹಿಳೆಯರ ಕುತ್ತಿಗೆಯಿಂದ ಚಿನ್ನಾಭರಣ ಎಳೆಯುತ್ತಿದ್ದವರು ಪೊಲೀಸರ ವಶಕ್ಕೆ
ಮೂಡುಬಿದಿರೆ : ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಆ.15 ಮತ್ತು ಸೆ. 2ರಂದು ನಡೆದ ಮಹಿಳೆಯರ ಚಿನ್ನಾಭರಣ ಎಳೆದೊಯ್ದು ಪರಾರಿಯಾಗಿದ್ದ ಈರ್ವರು ಖದೀಮರನ್ನು ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಅವರ ತಂಡ ವಶಕ್ಕೆ ತೆಗೆದುಕೊಂಡಿದ್ದಾರೆ
ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದ ಬಳಿ ನಿರ್ಮಲ ಪಂಡಿತ್(70 ವರ್ಷ) ಎಂಬವರ ಕುತ್ತಿಗೆಯಿಂದ ಸುಮಾರು 24 ಗ್ರಾಂ ಮೌಲ್ಯದ ಚಿನ್ನದ ಸರವನ್ನು ಮತ್ತು ಸೆ. 2ರಂದು ಮೂಡುಮಾರ್ನಾಡು ಗ್ರಾಮದ ಬಸದಿ ಬಳಿ ನಿವಾಸಿ ಪ್ರೇಮಾ(82 ವರ್ಷ ) ಎಂಬವರ ಕುತ್ತಿಗೆಯಿಂದ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಸ್ಕೂಟರ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು. ಈ ಬಗ್ಗೆ ಕಾರ್ಯಾಚರಣೆ ಆರಂಭಿಸಿದ್ದ ಸಂದೇಶ್ ಪಿ. ಜಿ. ನೇತೃತ್ವದ ಪೋಲೀಸರ ತಂಡ ಹಬೀಬ್ ಹಸನ್, ಯಾನೆ ಹಬ್ಬಿ ಯಾನೆ ಚೆಂಬುಗುಡ್ಡೆ, ಹಬ್ಬಿ( 42 ವರ್ಷ) ಚೆಂಬುಗುಡ್ಡೆ, ಪೆರ್ಮನ್ನೂರು ಗ್ರಾಮ, ಮಂಗಳೂರು ತಾಲೂಕು ಮತ್ತು ಉಮ್ಮರ ಸಿಯಾಫ್ ಯಾನೆ ಚಿಯಾ (29 ವರ್ಷ) ಅದ್ಯಾಡಿ ಮನೆ ಬಿ-ಮೂಡಾ, ಜೋಡು ಮಾರ್ಗ ಅಂಚೆ, ಬಂಟ್ವಾಳ ತಾಲೂಕು ಈರ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಂತರ್ ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ, ಹಲವಾರು ದರೋಡೆ, ಕಳ್ಳತನ, ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಆರೋಪಿಗಳು ಪ್ರಕರಣಗಳ ಕೃತ್ಯಕ್ಕೆ ಬಳಸಿದ ಟಿವಿಎಸ್.ಸ್ಕೂಟರ್ ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಕಳವು ಆಗಿರುವ ಸ್ಕೂಟರ್ ಆಗಿದ್ದು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಚಿನ್ನಾಭರಣಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 2,50,000/- ಆಗಿರುತ್ತದೆ.
ಪ್ರಕರಣದಲ್ಲಿ, ದಸ್ತಗಿರಿಯಾಗಿರುವ 1 ನೇ ಆರೋಪಿ ಹಬೀಬ್ ಹಸನ್, ಯಾನೆ ಹಬ್ಬಿ ಯಾನೆ ಚೆಂಬುಗುಡ್ಡೆ ಹಬ್ಬಿ ವಿರುದ್ಧ ದಕ್ಷಿಣ ಕನ್ನಡ ಉಡುಪಿಜಿಲ್ಲೆಗಳಲ್ಲಿ ಈವರೆಗೆ ಸುಮಾರು 42 ಪ್ರಕರಣಗಳು ದಾಖಲಾಗಿರುತ್ತದೆ. ಪ್ರಸ್ತುತ ಈತನು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ, 2 ದಸ್ತಗಿರಿ ವಾರೆಂಟ್, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 5 ದಸ್ತಗಿರಿ ವಾರೆಂಟ್, ಮುಲ್ಕಿ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್, ಕೋಣಾಜೆ ಪೊಲೀಸ್ ಠಾಣೆಯಲ್ಲಿ 2 ದಸ್ತಗಿರಿ ವಾರೆಂಟ್, ಬಟ್ಟೆ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ದಸ್ತಗಿರಿ ವಾರೆಂಟ್ ಗಳಿದ್ದು, ಒಟ್ಟು 15 ದಸ್ತಗಿರಿ ವಾರೆಂಟ್ ನ್ಯಾಯಾಲಯದಿಂದ ಹೊರಡಿಸಲಾಗಿದೆ.
ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, ಐ ಪಿ ಎಸ್ ರವರ ಮಾರ್ಗದರ್ಶನದಂತೆ, ಡಿ ಸಿ ಪಿ ಯವರಾದ ಸಿದ್ಧಾರ್ಥ ಗೊಯಲ್ ಐ ಪಿ ಎಸ್ (ಕಾ&ಸು), ದಿನೇಶ್ ಕುಮಾರ್ ಡಿ. ಸಿ. ಪಿ. (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎ ಸಿ ಪಿ ಶ್ರೀಕಾಂತ್. ಕೆ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ನಡೆಸಲಾಗಿದೆ. ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡದ ಪ್ರಶಾಂತ್ ಎ.ಎಸ್.ಐ, ಮೋಹನ್ ದಾಸ್ ಕೋಟ್ಯಾನ್ ಎ.ಎಸ್.ಐ ಮತ್ತು ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಬಾಲ್ , ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು