ಮೂಡುಬಿದಿರೆ : ದ್ವಿಚಕ್ರ ವಾಹನದಿಂದ ಬಿದ್ದು ಸಂಶಯಾಸ್ಪದ ಸಾವು
ಮೂಡುಬಿದಿರೆ : ಪಡುಮಾರ್ನಾಡು ಗ್ರಾಮದ ಬನ್ನಡ್ಕ ಎಂಬಲ್ಲಿ ಗುರುವಾರ ಸಂಜೆ ಬೈಕ್‌ನಿಂದ ಬಿದ್ದು ಚಿನ್ನದ ಕೆಲಸಗಾರ, ತೋಡಾರು ಗ್ರಾಮದ ಸೀತಾರಾಮ ಆಚಾರ್ಯ(49) ಮೃತಪಟ್ಟಿದ್ದು ಪೋಲಿಸರು ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ.
ಮೂಡುಬಿದಿರೆ ಜ್ಯೋತಿನಗರದಲ್ಲಿ ಚಿನ್ನದ ವೃತ್ತಿಗೆ ಸಂಬಂಧಿಸಿದ ವಿಘ್ನೇಶ್ ಮೆಷಿನ್ ಕಟ್ಟಿಂಗ್ ಉದ್ಯಮವನ್ನು ನಡೆಸುತ್ತಿದ್ದು ಜನವರಿ 3ರಂದು ನಡೆಯಲಿದ್ದ ಅವರ ಪುತ್ರನ ಉಪನಯನದ ಆಮಂತ್ರಣ ಪತ್ರಿಕೆಯನ್ನು ವಿತರಿಸಿ ವಾಪಸ್ಸು ಬರುತ್ತಿದ್ದ ವೇಳೆ ಬನ್ನಡ್ಕ ಬಳಿ ಬೈಕ್‌ನಿಂದ ಬಿದ್ದಿದ್ದರು. ಸ್ಥಳೀಯರು ಕೂಡಲೇ ಅಲಂಗಾರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದರು.ಮೃತರ ಸಹೋದರ ನೀಡಿದ ದೂರಿನಂತೆ ಪೋಲಿಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿದ್ದಾರೆ.