ಮೂಡುಬಿದಿರೆ: ಶ್ರೀಕ್ಷೇತ್ರ ಪುತ್ತಿಗೆಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ
ಮೂಡುಬಿದಿರೆ: ಇಲ್ಲಿನ ಚೌಟರ ಅರಮನೆಯ ಆಡಳಿತಕ್ಕೆ ಒಳಪಟ್ಟ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಫೆ.28ರಿಂದ ಮಾರ್ಚ್ 7ರವರೆಗೆ ಧಾರ್ಮಿಕ ಕಾರ್ಯಕ್ರಮ, ಮಾರ್ಚ್ 6ರಂದು ಬ್ರಹ್ಮಕಲಶೋತ್ಸವ ನಡೆಸುವುದೆಂದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಭಾನುವಾರ ಸಾಯಂಕಾಲ ದೇವಳದ ಆವರಣದಲ್ಲಿ ನಡೆದ ಸಭೆಯ ಮೊದಲು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನಾಂಕವನ್ನು ತಂತ್ರಿವರೇಣ್ಯರು, ಅರ್ಚಕವರ್ಗ, ಜೀರ್ಣೋದ್ದಾರ ಸಮಿತಿ ಹಾಗೂ ದೇವಳದ ಸಿಬ್ಬಂದಿಗಳನ್ನೊಳಗೊಂಡು ಸಪರಿವಾರ ಶ್ರೀ ದೇವರುಗಳಿಗೆ ಪ್ರಾರ್ಥನಾ ಪೂರ್ವಕವಾಗಿ ನಿವೇದಿಸಿಕೊಳ್ಳಲಾಯಿತು.
ಎಡಪದವು ವೆಂಕಟೇಶ ತಂತ್ರಿಯವರು ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನಾಂಕವನ್ನು ಘೋಷಿಸಿ ಶ್ರೀ ದೇವಳಕ್ಕೆ ಸಂಬಂಧಪಟ್ಟ ಊರ ಜನರು ಬ್ರಹ್ಮಕಲಶ ಪರ್ಯಂತ ಪಾಲಿಸಬೇಕಾದ ನಿಯಾಮಾವಳಿ ಗಳನ್ನು ತಿಳಿಸಿದರು.
ದೇವಳದ ಅನುವಂಶಿಕ ಆಡಳಿತ ಮೊಕ್ತಸರ ಚೌಟರ ಅರಮನೆಯ ಕುಲದೀಪ್ ಎಂ. ಮಾತನಾಡಿ, ಭಕ್ತರ ಸಂಕಲ್ಪ, ದೇವರ, ಭಕ್ತರ ಕರಸೇವೆ, ದಾನಿಗಳ ಕೊಡುಗೆಯೊಂದಿಗೆ ವ್ಯವಸ್ಥಿತ ರೀತಿಯಲ್ಲಿ ದೇವಾಲಯ ಜೀರ್ಣೋದ್ಧಾರಗೊಳ್ಳುತ್ತಿದೆ. ಶೇ.75ರಷ್ಟು ಕೆಲಸಗಳು ಮುಗಿದಿದ್ದು, ಮುಂದಿನ ಎಲ್ಲ ಕೆಲಸಗಳಿಗೂ ಭಕ್ತರ ಸಹಕಾರ ಅತ್ಯಗತ್ಯ ಎಂದರು.
ದೇವಳದ ವಾಸ್ತುತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕ ಅಡಿಗಳ್ ಅನಂತಕೃಷ್ಣ ಭಟ್, ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕೆ. ಶ್ರೀಪತಿ ಭಟ್, ವಿದ್ಯಾ ರಮೇಶ್ ಭಟ್, ನೀಲೇಶ್ ಶೆಟ್ಟಿ ಸಹಿತ ಪ್ರಮುಖರು, ಭಕ್ತರು ಉಪಸ್ಥಿತರಿದ್ದರು.
ಪ್ರಶಾಂತ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.