ತ್ಯಾಜ್ಯ ಸಮಸ್ಯೆಯಿಂದ ನಲುಗುತ್ತಿರುವ ಪಡುಬಿದ್ರಿ
ಅದೆಷ್ಟೋ ವರ್ಷಗಳಿಂದ ತ್ಯಾಜ್ಯ ಸಮಸ್ಯೆಯಿಂದ ನಲುಗುತ್ತಿರುವ ಪಡುಬಿದ್ರಿಯ ಈ ಜಟಿಲ ಸಮಸ್ಯೆಗೆ ಮುಕ್ತಿಯಾರಿಂದ ಯಾವಾಗ ಎಂಬ ಪ್ರಶ್ನೆಗೆ ಎಲ್ಲೂ ಉತ್ತರವೇ ಸಿಗುತ್ತಿಲ್ಲ, ಪರಿಣಾಮ ಪಡುಬಿದ್ರಿ ಗ್ರಾ.ಪಂ. ಕಛೇರಿಯ ಮುಂಭಾಗದಲ್ಲೇ ರಾಶಿ ರಾಶಿ ದುರ್ನಾತ ಪ್ಲಾಸ್ಟಿಕ್ ತ್ಯಾಜ್ಯರಾಶಿ.
ಬೃಹತ್ ಕಂಪನಿಗಳಿಗೆ ಸಾಹಸ್ರಾರು ಎಕ್ರೆ ಭೂಮಿ ನೀಡುವಾಗ, ಯಾವ ಅಧಿಕಾರಿ ಸಹಿತ ಯಾವೊಬ್ಬ ಜನಪ್ರತಿನಿಧಿಗೂ ಗ್ರಾಮದ ಉಪಯೋಗಕ್ಕೆ ಒಂದಿಷ್ಟು ಭೂಮಿಯನ್ನು ಉಳಿಸ ಬೇಕೆಂಬ ಅಲೋಚನೆಯೇ ಬಂದಿಲ್ಲ, ಇದ್ದ ಬದ್ದ ಎಲ್ಲಾ ಜಾಗಗಳನ್ನು ಕಂಪನಿಗಳಿಗೆ ನೀಡಿ ಕೈ ತೊಳೆದುಕೊಂಡಿದೆ. ಇದೀಗ ಕಂಪನಿಗಳು ಊಪಯೋಗಿಸದೆ ಉಳಿಸಿದ ಖಾಲಿ ಜಾಗದಲ್ಲಿ ಐವತ್ತು ಸೆಂರ್ಟ್ಸ್ ಜಾಗವನ್ನು ತ್ಯಾಜ್ಯ ಘಟಕ ನಡೆಸಲು ಗ್ರಾ.ಪಂ. ಬೇಡಿದರೂ ನೀಡಲು ಹಿಂದೇಟು ಹಾಕುತ್ತಿದೆ ಕಂಪನಿ. ಕಾರಣ ಇದರಲ್ಲಿ ಭೂ ಮಾಫಿಯ ನಡೆಯುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿಯವರು ನೀಡಿದ ಭರವಸೆ ತಾತ್ಕಾಲಿಕವಾಗಿ ಗ್ರಾ.ಪಂ. ಮುಂಭಾಗ ತ್ಯಾಜ್ಯ ಸಂಸ್ಕರಣಾ ಘಟಕ ಮಾಡಿ ಮುಂದಿನ ದಿನದಲ್ಲಿ ಶಾಶ್ವತ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಸ್ಥಳಾವಕಾಶ ನೀಡುವುದಾಗಿ ತಿಳಿಸಿದ್ದರೂ, ಅವರ ವರ್ಗಾವಣೆಯ ಬಳಿಕ ಯಾವೊಬ್ಬ ಅಧಿಕಾರಿ ಸಹಿತ ಜವಾಬ್ದಾರಿಯುತ ಜನಪ್ರತಿನಿಧಿಗಳು ಇದರ ಬಗ್ಗೆ ಹೆಚ್ಚಿನ ಒಲವು ತೋರಿಸಿದಂತ್ತಿಲ್ಲ.
ಕೇವಲ ಕೆಲ ಮಟ್ಟದ ಅಧಿಕಾರಿಗಳಿಗೆ ಆದೇಶ ನೀಡುವುದು ಬಿಟ್ಟರೆ..ಸಮಸ್ಯೆ ಇತ್ಯಾರ್ಥಕ್ಕೆ ಮುಂದಾಗುತ್ತಿಲ್ಲ. ಇದೀಗ ರಾಷ್ಟ್ರೀಯ ಹೆದ್ದಾರಿ ಪಕ್ಕ ಗ್ರಾಮ ಕಛೇರಿಯ ಮುಂಭಾಗ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ ಬಾನೆತ್ತರಕ್ಕೆ ಬೆಳೆದಿದೆ. ಇದರ ವಿಲೇವಾರಿಗಾಗಿ ಗ್ರಾ.ಪಂ. ಟೆಂಡರ್ ಕರೆದರೂ ಯಾರೂ ಭಾಗವಹಿಸುತ್ತಿಲ್ಲ ಎಂಬ ಮಾಹಿತಿ ಅಧಿಕಾರಿಗಳಿಂದ ಕೇಳಿ ಬರುತ್ತಿದೆ. ಮುಂದೆ ಮಳೆ ಆರಂಭವಾದರಂತ್ತೂ ಈ ದುರ್ನಾತ ತ್ಯಾಜ್ಯದ ನೀರು ಎಲ್ಲೆಡೆ ಹರಿದು ಪಡುಬಿದ್ರಿ ಪ್ರದೇಶ ರೋಗ ರುಜಿನೆಗಳ ತಾಣವಾಗ ಬಹುದು ಎಂಬ ಆತಂಕ ಜನರನ್ನು ಕಾಡುತ್ತಿದೆ. ಈ ಎಲ್ಲಾ ನಿರಾಶೆಗಳ ಮಧ್ಯೆ ದೂರದಲ್ಲೊಂದು ಆಶಾ ಭಾವನೆ ಮೂಡುತ್ತಿದೆ, ಅದೇ ನೂತನ ಶಾಸಕರು.. ನೂತನ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಈ ಸಮಸ್ಯೆಗೆ ಮುಕ್ತಿ ನೀಡುವ ಭರವಸೆ ವ್ಯಕ್ತ ಪಡಿಸಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದ್ದಾರೆ.