ಮಣಿಪುರದಲ್ಲಿ ಚರ್ಚ್ ಮತ್ತು ಕ್ರಿಶ್ಚಿಯನ್ನರ ಮೇಲೆ ದಾಳಿ ಖಂಡಿಸಿ ಪುತ್ತೂರಿನಲ್ಲಿ ಸಿಐಟಿಯು ವತಿಯಿಂದ ಪ್ರತಿಭಟನೆ
ಪುತ್ತೂರು : ಮಣಿಪುರ ರಾಜ್ಯದಲ್ಲಿ ಮೀಸಲಾತಿ ಗಲಭೆ ಸೃಷ್ಠಿಸಿ ಚರ್ಚ್ ಮತ್ತು ಕ್ರಿಶ್ಚಿಯನರ ಮೇಲೆ ಮೇಲೆ ನಡೆಸಲಾಗಿರುವ ದಾಳಿಯನ್ನು ಖಂಡಿಸಿ ಮತ್ತು ಮಣಿಪುರದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವಂತೆ ಆಗ್ರಹಿಸಿ ಪುತ್ತೂರಿನ ಆಡಳಿತ ಸೌಧದ ಎದುರು ಸಿಐಟಿಯು ಬೆಂಬಲಿತ ತಾಲ್ಲೂಕು ಬೀಡಿ ಕೆಲಸಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಗೌರವಾಧ್ಯಕ್ಷರಾದ ಕಾರ್ಮಿಕ ಮುಂದಾಳು ಬಿ.ಎಂ.ಭಟ್ ಅವರು, ಮಣಿಪುರದಲ್ಲಿ ಬುಡಕಟ್ಟ ಜನಾಂಗಗಳ ನಡುವೆ ವೈಷಮ್ಯ ಸೃಷ್ಟಿಸಿ ಕ್ರಿಶ್ಚಿಯನ್ನರ, ಚರ್ಚ್ಗಳ, ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
200ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಜನರು ಮನೆ ಬಿಟ್ಟು ಓಡಿ ಹೋಗುವ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಕರ್ಫ್ಯೂ ಜಾರಿಗೊಳಿಸಿ ಕೋವಿಡ್ ಕಾಲದ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ಮೀಸಲಾತಿ ಸಮಸ್ಯೆಯನ್ನು ಪರಿಹರಿಸಲಾಗದ ಕೇಂದ್ರ ಮತ್ತು ಮಣಿಪುರ ಸರ್ಕಾರದ ನೀತಿ ದುರುದ್ದೇಶಪೂರಿತವಾದುದ್ದಾಗಿ ಎಂದರು.
ಪ್ರತಿಭಟನೆಯ ಬಳಿಕ ಮಣಿಪುರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂದು ಆಗ್ರಹಿಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಪುತ್ತೂರು ತಾಲ್ಲೂಕು ಸಿಪಿಐಎಂ ಕಾರ್ಯದರ್ಶಿ ಪಿ.ಕೆ.ಸತೀಶನ್, ಪುತ್ತೂರು ತಾಲ್ಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ಗುಡ್ಡಪ್ಪ ಗೌಡ, ಕಾರ್ಮಿಕ ಮುಖಂಡೆ ಈಶ್ವರಿ, ಪಾಲ್ತಾಡು ಗ್ರಾಮವನ್ನು ಪುತ್ತೂರಿಗೆ ಸೇರಿಸುವ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟ್ರಮಣ ಗೌಡ ಮತ್ತಿತರರು ಇದ್ದರು.