ಫೆ.5ರಿಂದ 9ರ ವರೆಗೆ ಕರಾವಳಿಯಲ್ಲಿ ಪ್ರಜಾಧ್ವನಿ ಯಾತ್ರೆ

ಕರಾವಳಿ ಭಾಗದಲ್ಲಿ ಫೆ.5ರಿಂದ 9ರವರೆಗೆ ಪ್ರಜಾಧ್ವನಿ ಯಾತ್ರೆ ಕೈಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಜನ ಜಾಗೃತಿ ಮೂಡಿಸಲಾಗುವುದು ಎಂದು ಮಾಜಿ ಸಚಿವ ಹಾಲಿ ಶಾಸಕ ಹಾಗೂ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಧ್ವನಿ ಯಾತ್ರೆ ಫೆ.5ರಂದು ಸುಳ್ಯದಿಂದ ಆರಂಭಗೊಂಡು ಫೆ.6ರಂದು ಮೂಡಬಿದಿರೆ, ಫೆ.7ರಂದು ಕಾಪು, ಫೆ.8ರಂದು ಕುಂದಾಪುರ, ಫೆ.9ರಂದು ಶೃಂಗೇರಿ ತಲುಪಲಿದೆ ಎಂದರು. ಈ ಬಾರಿಯ ಬಜೆಟ್ ನಲ್ಲಿಯೂ ನರೇಗಾ ಯೋಜನೆಗೆ ಅನುದಾನ ಕಡಿತಗೊಳಿಸಿ ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚಾಗಲು ಕೇಂದ್ರ ಸರಕಾರ ಕಾರಣವಾಗಿದೆ. ಇದರೊಂದಿಗೆ ಜನರ ಅಭಿವೃದ್ಧಿ, ಸಮಸ್ಯೆ ನಿವಾರಣೆಗೆ ಸರ್ಕಾರ ಮುಂದಾಗುವ ಬದಲು ಸಮಸ್ಯೆ ಗೆ ಸಿಲುಕುವಂತೆ ಮಾಡುತ್ತಿದೆ ಎಂದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಜನರ ಕೈಗೆ ಉದ್ಯೋಗ ನೀಡಿ ಬಡತನ ನಿರ್ಮೂಲನೆ ಗೆ ಹಾಕಿಕೊಟ್ಟ ಉದ್ಯೋಗ ಭರವಸೆ ಯೋಜನೆಗೆ ಕೋಟ್ಯಂತರ ರೂಪಾಯಿ ಅನುದಾನ ಕಡಿತಗೊಳಿಸಿದೆ. ರಾಜ್ಯ ಸರಕಾರ ಕಮೀಷನ್ ಸರ್ಕಾರ ವಾಗಿದೆ. ಆದುದರಿಂದ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನರ ಬಳಿ ಮತ ಕೇಳುವ ನೈತಿಕತೆ ಇಲ್ಲ ಎಂದು ದೇಶಪಾಂಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮವಿಧಾನಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್, ಡಾ.ಮಂಜುನಾಥ್ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಜೆ.ಆರ್. ಲೋಬೊ, ಐವನ್ ಡಿ ಸೋಜ, ಕಾಂಗ್ರೆಸ್ ಮುಖಂಡರಾದ ಪಿ.ವಿ.ಮೋಹನ್, ಮಮತಾ ಗಟ್ಟಿ, ನವೀನ್ ಡಿ ಸೋಜ ಮೊದಲಾದವರು ಉಪಸ್ಥಿತರಿದ್ದರು.