ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲದ ನೇತೃತ್ವದಲ್ಲಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲದ ಸಹೃದಯ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಆಯೋಜಿಸಲಾಗುತ್ತಿರುವ ಪಂಚಮ ವರ್ಷದ ‘ಉಡುಪಿ ಉಚ್ಚಿಲ ದಸರಾ-2026’ ಉತ್ಸವದ ಪೂರ್ವಭಾವಿ ಸಭೆಯು ಆಗಸ್ಟ್ 8ರಂದು ನಡೆಯಲಿದೆ.
ಸಭೆಯು ಶನಿವಾರ ಅಪರಾಹ್ನ 3.30ಕ್ಕೆ ಉಚ್ಚಿಲದ ಮೊಗವೀರ ಭವನದಲ್ಲಿ ನಡೆಯಲಿದ್ದು, ಉತ್ಸವದ ರೂಪುರೇಷೆಗಳು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ವಿವಿಧ ಸಮಿತಿಗಳ ಜವಾಬ್ದಾರಿಗಳು ಮತ್ತು ಅಗತ್ಯ ವ್ಯವಸ್ಥೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಗುವುದು.
ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸಲ್ಪಟ್ಟಿರುವ ‘ಉಡುಪಿ ಉಚ್ಚಿಲ ದಸರಾ’ ರಾಜ್ಯ ಹಾಗೂ ದೇಶ-ವಿದೇಶಗಳ ಭಕ್ತರ ಗಮನ ಸೆಳೆದಿದ್ದು, ವಿಶಿಷ್ಟ ದಸರಾ ಉತ್ಸವವಾಗಿ ತನ್ನದೇ ಆದ ಹೆಗ್ಗಳಿಕೆಯನ್ನು ಗಳಿಸಿದೆ. ಈ ಬಾರಿಯ ಉತ್ಸವವು ಅಕ್ಟೋಬರ್ 11ರಿಂದ 21ರವರೆಗೆ ಒಟ್ಟು 11 ದಿನಗಳ ಕಾಲ ವೈಭವಯುತವಾಗಿ ನಡೆಯಲಿದ್ದು, ವಿವಿಧ ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜನಪರ ಚಟುವಟಿಕೆಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಲಿವೆ.
ಪೂರ್ವಭಾವಿ ಸಭೆಗೆ ಸಮಿತಿಯ ಸರ್ವ ಸದಸ್ಯರು, ಸಹೃದಯ ಭಕ್ತರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರಿಕಾ ಸಂಘಟನೆಗಳ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಉತ್ಸವವನ್ನು ಇನ್ನಷ್ಟು ಶಿಸ್ತುಬದ್ಧವಾಗಿ, ವೈಭವಯುತವಾಗಿ ಮತ್ತು ಆಕರ್ಷಕವಾಗಿ ನಡೆಸಲು ತಮ್ಮ ಸಲಹೆ-ಸೂಚನೆಗಳನ್ನು ನೀಡುವಂತೆ ದ.ಕ. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ, ದಸರಾ ಉತ್ಸವ ಸಮಿತಿ ಹಾಗೂ ಕ್ಷೇತ್ರಾಡಳಿತ ಸಮಿತಿ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


