HomeFresh Newsಪುತ್ತೂರು: ಎವಿಜಿ ಶಾಲೆಯಲ್ಲಿ ಪರಿಸರ ದಿನಾಚರಣೆ ಹಾಗೂ ಯೋಧರಿಗೆ ಅಭಿನಂದನೆ

ಪುತ್ತೂರು: ಎವಿಜಿ ಶಾಲೆಯಲ್ಲಿ ಪರಿಸರ ದಿನಾಚರಣೆ ಹಾಗೂ ಯೋಧರಿಗೆ ಅಭಿನಂದನೆ

ಪುತ್ತೂರು ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಯಿತು. ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ವಿಜ್ಞಾನ ವಿಭಾಗದ ಶಿಕ್ಷಕಿಯಾದ ಶ್ರೀಮತಿ ಸಿಂಧು .ವಿ.ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪರಿಸರದ ಮಹತ್ವವನ್ನು ತಿಳಿಸಿದರು. ನಮ್ಮ ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಹಾನಿ ಹಾಗೂ ಜಾಗತಿಕ ತಾಪಮಾನ ಏರುವುದಕ್ಕೆ ಇರುವ ಅನೇಕ ಕಾರಣಗಳನ್ನು ತಿಳಿಸಿ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸುವುದಕ್ಕೆ ನಮ್ಮ ಮನೆ ಹಾಗೂ ಶಾಲೆಯಿಂದ ಆರಂಭಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.


ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಪುತ್ತೂರಿನ ಬೆಳ್ಳಿಪಾಡಿ ಗ್ರಾಮದ ಮಳುವೇಲು ಮನೆತನದ ಶ್ರೀ ಪದ್ಮನಾಭ ಗೌಡ ರವರು ಮೊನ್ನೆ ನಡೆದ ಆಪರೇಷನ್ ಸಿಂಧೂರದಲ್ಲಿ ಭಾರತದ ಯೋಧನಾಗಿ ಪಾಲ್ಗೊಂಡಿದ್ದರು. ಅವರು ಹುಟ್ಟೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಶಾಲಾ ವತಿಯಿಂದ ಆರತಿ ಎತ್ತಿ, ಹಣೆಗೆ ಸಿಂಧೂರವಿಟ್ಟು ,ಮೈಸೂರು ಪೇಟವನ್ನು ತೊಡಿಸಿ ಸಪತ್ನಿಕರಾಗಿ ಗೌರವಿಸಿ ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭಾರತೀಯರ ಯೋಧರ ಸಾಹಸಗಾಥೆಯನ್ನು ವಿವರಿಸಿ ಭಾರತದ ಗಡಿ ರಕ್ಷಣೆಯಲ್ಲಿ ನಮ್ಮ ಯೋಧರ ಧೈರ್ಯ ಸಾಹಸವನ್ನು ಕೊಂಡಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷರಾದ ಶ್ರೀ ಕಳುವಾಜೆ ವೆಂಕಟರಮಣ ಗೌಡ ವಹಿಸಿದ್ದು ಅವರು ಮಾತನಾಡಿ ಪರಿಸರ ಹಾಳಾದರೆ ನಾವು ಹಾಳಾದಂತೆ ಹಾಗಾಗಿ ನಮ್ಮ ಪರಿಸರವನ್ನು ನಾವು ಬಹಳ ಎಚ್ಚರಿಕೆಯಿಂದ ಕಾಪಾಡಬೇಕು ಎನ್ನುತ್ತಾ, ಭಾರತೀಯ ಯೋಧರ ಬಗ್ಗೆ ಅಭಿನಂದನೆಯ ನುಡಿಗಳನ್ನು ಆಡಿದರು. ಶಾಲೆಯ ಆಡಳಿತ ಅಧಿಕಾರಿಯಾಗಿರುವ ಶ್ರೀ ಗುಡ್ಡಪ್ಪ ಗೌಡ ಬಲ್ಯರವರು ಸ್ವಾಗತಿಸಿ, ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಳುವೇಲು ಸನ್ಮಾನಿತರ ಪರಿಚಯವನ್ನು ಮಾಡಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಎ ವಿ ನಾರಾಯಣ , ನಿರ್ದೇಶಕರಾದ ಶ್ರೀ ಗಂಗಾಧರ ಗೌಡ, ಸ್ಥಳೀಯ ನಗರಸಭಾ ಸದಸ್ಯರಾದ ಶ್ರೀಮತಿ ಗೌರಿ ಬನ್ನೂರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ಹೆಗಡೆ, ಪ್ರಾಂಶುಪಾಲರಾದ ಶ್ರೀ ಅಮರನಾಥ್ ಪಟ್ಟೆ ಉಪಸ್ಥಿತರಿದ್ದರು. ಕುಮಾರಿ ಜೋತ್ಸ್ನ ಮತ್ತು ತಂಡ ಪ್ರಾರ್ಥಿಸಿದರು.ಶಿಕ್ಷಕ ವೃಂದ ಸಹಕರಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ರೀಮಲೋಬೋ ವಂದನಾರ್ಪಣೆಗೈದು, ಶ್ರೀಮತಿ ಹಿತ ಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಅತಿಥಿಯಾಗಿದ್ದ ಪದ್ಮನಾಭ ಮಲುವೇಳು ಅವರು ಮಕ್ಕಳಿಗೆ ಸಿಹಿ ತಿಂಡಿ ಹಂಚಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments