ಪಾಣೆಮಂಗಳೂರು ಹಳೆ ಸೇತುವೆ ಬಳಿ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಅವರ ಮೃತದೇಹ ಪತ್ತೆ

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಬೈಕ್, ಮೊಬೈಲ್, ಚಪ್ಪಲಿ ಹಾಗೂ ಅಂಗಿ ಬಿಟ್ಟು ನಾಪತ್ತೆಯಾಗಿದ್ದ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಅವರ ಮೃತದೇಹ ಪತ್ತೆಯಾಗಿದೆ. ಅವರು ಸುಳ್ಯ ಮಂಗಳ ಡ್ರೈವಿಂಗ್ ಸ್ಕೂಲ್ ನ ಮಾಲಕ.
ಇಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಪಾಣೆಮಂಗಳೂರು ಹಳೆ ಸೇತುವೆಯ ಕೆಳಭಾಗದಲ್ಲಿ ಬೈಕ್ ಅಂಗಿ ಮೊಬೈಲ್ ಮತ್ತು ಚಪ್ಪಲ್ಲಿ ಅನಾಥವಾಗಿ ಬಿದ್ದಿರುವುದನ್ನು ಗಮನಿಸಿ, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳೀಯರ ಹಾಗೂ ಈಜುಪಟುಗಳ ನೆರವಿನಿಂದ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಕುಟುಂಬವರ್ಗ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ರಮೇಶ್ ರೈ ಅವರು ಇತ್ತೀಚೆಗೆ ನಡೆದ ಪುತ್ತೂರು ನಗರಸಭೆಯ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ನೆಲ್ಲಿಕಟ್ಟೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಜನಾನುರಾಗಿಯಾಗಿದ್ದ ಅವರು ಸಜ್ಜನ ರಾಜಕಾರಣಿ ಎಂದೇ ಚಿರಪರಿಚಿತರಾಗಿದ್ದರು. ಅವರ ಮಿತ್ರರು ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದಾರೆ. ಆರೋಗ್ಯ ಸಮಸ್ಯೆ ಅಥವಾ ಹಣಕಾಸಿನ ಸಮಸ್ಯೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗುತ್ತಿದೆ.
ಪಾಣೆಮಂಗಳೂರು ಸೇತುವೆ ಬಳಿ ದೊರೆತ ಮೊಬೈಲ್ನಿಂದ ಸಂಖ್ಯೆಯನ್ನು ಪಡೆದು ಪೊಲೀಸರು ಕರೆ ಮಾಡಿದಾಗ, ಅದು ಪುತ್ತೂರಿನ ರಮೇಶ್ ರೈ ಅವರಿಗೆ ಸೇರಿದ್ದೆಂದು ತಿಳಿದುಬಂದಿತ್ತು. ಕೂಡಲೇ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಇದೀಗ ಕುಟುಂಬ ಸದಸ್ಯರು ಮೃತದೇಹವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
