ಪುತ್ತೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮಗುವಿಗೆ ತಂದೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಜೆ.ರಾವ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳಿಗೆ ಹೈಕೋರ್ಟ್ ಮದ್ಯಂತರ ತಡೆಯಾಜ್ಞೆ ನೀಡಿದೆ.ಜೊತೆಗೆ ಆದೇಶದಲ್ಲಿ ಮಗು ಮತ್ತು ತಾಯಿಗೆ ಪ್ರತಿ ತಿಂಗಳು 75 ಸಾವಿರ ಜೀವನಾಂಶ ನೀಡಲು ಹೈಕೋರ್ಟ್ ಆದೇಶಿಸಿದೆ.

ಪ್ರಕರಣ ರದ್ದು ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.
ಅರ್ಜಿದಾರ ಆರೋಪಿಯು ಸ್ವತಃ ಅಥವಾ ತನ್ನ ಪೋಷಕರ ಮೂಲಕ ಸಂತ್ರಸ್ತೆ ಹಾಗೂ ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರತೀ ತಿಂಗಳು 75 ಸಾವಿರ ರೂ.ಪಾವತಿಸಬೇಕು ಎಂಬ ಷರತ್ತಿಗೆ ಒಳಪಟ್ಟು ಪ್ರಕರಣದ ಮುಂದಿನ ಎಲ್ಲ ಪ್ರಕ್ರಿಯೆಯಗಳಿಗೆ ನ್ಯಾಯಾಲಯ ತಡೆ ನೀಡಿದೆ. ಅರ್ಜಿದಾರರು ಮುಂದಿನ ಒಂದು ವಾರದ ಒಳಗೆ ಸಂತ್ರಸ್ತೆಗೆ 75 ಸಾವಿರ ರೂ.ಗಳನ್ನು ಪಾವತಿಸಬೇಕು. ಅದಾದ ನಂತರ ಪ್ರತೀ ತಿಂಗಳು ಹಣ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಸಂತ್ರಸ್ತೆಯ ಪೋಷಕರು ಹಾಗೂ ಸಂಬಂಧಿಕರು ಯಾವುದೇ ರೀತಿಯ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದೆಂದು ಕೋರ್ಟ್ ತಿಳಿಸಿದೆ
