ಉಪ್ಪಿನಂಗಡಿ – ಕೊಯಿಲಾ ರಸ್ತೆಯ ಹಿರೇಬಂಡಾಡಿ ಶಾಖೆಪುರ ಎಂಬಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ರವೀಂದ್ರ ರೈ ಮುರದಮೇಲುರವರ ಪುತ್ರ ಕಾಲೇಜ್ ವಿದ್ಯಾರ್ಥಿ ಲಿಖಿತ್ ರೈ ಎಂದು ಗುರುತಿಸಲಾಗಿದೆ.ಏ. 22ರಂದು ಸಂಜೆ ಲಿಖಿತ್ ರೈ ಅವರು ತಮ್ಮ ಕೆಎ 21 ಇಸಿ-7292 ಸಂಖ್ಯೆಯ ಮೋಟಾರ್ ಸೈಕಲ್‌ನಲ್ಲಿ ಉಪ್ಪಿನಂಗಡಿ – ಕೊಯಿಲಾ ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಹಿರೇಬಂಡಾಡಿ ಶಾಖೆಪುರ ಎಂಬಲ್ಲಿ ತಲುಪಿದಾಗ ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ.
ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ದಯಾನಂದ ಹಾಗೂ ಸಾರ್ವಜನಿಕರು ತಕ್ಷಣವೇ ಉಪಚರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಹಿರೇಬಂಡಾಡಿ ನಿವಾಸಿ ದಯಾನಂದ (49) ಅವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅಕ್ರ ಸಂಖ್ಯೆ 71/2026, ಬಿಎನ್‌ಎಸ್ ಕಲಂ 281 ಹಾಗೂ 125(b) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
